ಬೆಂಗಳೂರು: ಇದೇ 5ರಂದು ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕೂಟಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
‘ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಆಸನ ಸಾಮರ್ಥ್ಯ 18 ಸಾವಿರ ಇದೆ. ಸದ್ಯ 15 ಸಾವಿರ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದು, ಹೆಚ್ಚಿನ ಬೇಡಿಕೆ ಬಂದರೆ ಉಳಿದ ಟಿಕೆಟ್‌ಗಳನ್ನೂ ಮಾರಾಟಕ್ಕಿಡಲಾಗುವುದು’ ಎಂದು ಆಯೋಜಕರು ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುಂಜಾಗ್ರತೆ ವಹಿಸಲಾಗುವುದು. ಕ್ರೀಡಾಂಗಣದಲ್ಲಿ ಸಿವಿಲ್ ಕಾಮಗಾರಿಗಳು ನಡೆಯುತ್ತಿರುವುದರಿಂದ, ಕ್ರೀಡಾಪಟುಗಳು 400 ಮೀ. ಟ್ರ್ಯಾಕ್ ಬಳಸದಂತೆ ಜುಲೈ 6ರವರೆಗೆ ನಿಷೇಧ ಹೇರಲಾಗಿದೆ ಎಂದೂ ಮಾಹಿತಿ ನೀಡಿದರು.
ಗೃಹ ಸಚಿವ ಜಿ. ಪರಮೇಶ್ವರ, ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪಶ್ಚಿಮ ವಲಯದ ಜಂಟಿ ಪೊಲೀಸ್ ಕಮಿಷನರ್ ವಂಶಿಕೃಷ್ಣ ಅವರು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸಿದ್ಧತೆಯನ್ನು ಪರಿಶೀಲಿಸಿದರು. ಆಯೋಜಕರಿಂದ ಕಾರ್ಯಕ್ರಮದ ಸಮಗ್ರ ಮಾಹಿತಿ ಕಲೆಹಾಕಿದರು.
ಆ್ಯಂಡರ್ಸನ್ ಪೀಟರ್ಸ್ ಗೈರು
ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಅವರು ಪಾದದ ಗಾಯದಿಂದ ಬಳಲುತ್ತಿದ್ದು, ಸ್ಪರ್ಧೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಇದು ಜಾವೆಲಿನ್ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಪೀಟರ್ಸ್ ಅವರ ಬದಲಿಗೆ ಪೋಲೆಂಡ್‌ನ ಸಿಪ್ರಿಯಾನ್ ರಿಗ್ಲೋಡ್ ಸ್ಪರ್ಧಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಬಲ್ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಆಶ್ರಯದಲ್ಲಿ ಈ ಸ್ಪರ್ಧೆ ನಿಗದಿಯಂತೆ ಮೇ 24ರಂದು ನಡೆಯಬೇಕಾಗಿತ್ತು. ಆದರೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟ್ಟ ಕಾರಣ ಮುಂದೂಡಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.