ನವದೆಹಲಿ: ಭಾರತ– ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಮೇ 24ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಕೂಟವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಒಲಿಂಪಿಕ್ ಡಬಲ್ ಪದಕ ವಿಜೇತ ನೀರಜ್ ಚೋಪ್ರಾ ಅವರ ಹೆಸರಿನ ಕೂಟವನ್ನು ಪಂಚಕುಲಾದಲ್ಲಿ ಆಯೋಜಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ನಂತರದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಎಂದು ಸ್ಥಳಾಂತರಿಸಲಾಗಿದೆ ಎಂದು ಚೋಪ್ರಾ ಘೋಷಿಸಿದ್ದರು.
ಕೂಟದ ಮುಂದೂಡಿಕೆಯನ್ನು ಚೋಪ್ರಾ ಎನ್‌ಸಿ ಕ್ಲಾಸಿಕ್ ತಂಡದ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಪರಿಷ್ಕೃತ ವೇಳಾಪಟ್ಟಿಯನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
‘ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎನ್‌ಸಿ ಕ್ಲಾಸಿಕ್‌ನ ಉದ್ಘಾಟನಾ ಆವೃತ್ತಿಯನ್ನು ಮುಂದಿನ ಸೂಚನೆ ಬರುವವರೆಗೆ ಮುಂದೂಡಲಾಗಿದೆ. ಕ್ರೀಡಾಪಟುಗಳು, ಭಾಗಿದಾರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಣಾಯಕ ಕ್ಷಣದಲ್ಲಿ, ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲುವುದು ಅತ್ಯಂತ ಮುಖ್ಯ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.