ದೋಹಾ (ಪಿಟಿಐ): ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರು ಶುಕ್ರವಾರ ರಾತ್ರಿ ಡೈಮಂಡ್ ಲೀಗ್‌ನ ದೋಹಾ ಲೆಗ್‌ನಲ್ಲಿ ಎರಡನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಬಳಿಕ ಮುಂದಿನ ಲೆಗ್‌ನಲ್ಲಿ ಒಂದು ಹೆಜ್ಜೆ ಮುಂದೆ ಸಾಗುವ ಪ್ರತಿಜ್ಞೆ ಮಾಡಿದರು.
ಕೇವಲ ಎರಡು ಸೆಂಟಿ ಮೀಟರ್ ಅಂತರದಲ್ಲಿ ಭಾರತದ 26 ವರ್ಷದ ಅಥ್ಲೀಟ್ ಅಗ್ರಸ್ಥಾನವನ್ನು ತಪ್ಪಿಸಿಕೊಂಡರು. ತನ್ನ ಕೊನೆಯ ಪ್ರಯತ್ನದಲ್ಲಿ 88.36 ಮೀಟರ್ ಸಾಧನೆ ಮಾಡಿದರು. ಚೋಪ್ರಾ ಕಳೆದ ಆವೃತ್ತಿಯಲ್ಲಿ 88.67 ಮೀಟರ್ ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದಿದ್ದರು.
ಹಿಂದಿನ ಆವೃತ್ತಿಯಲ್ಲಿ ಕೇವಲ ನಾಲ್ಕು ಸೆಂಟಿ ಮೀಟರ್ ಅಂತರದಲ್ಲಿ ಮೊದಲ ಸ್ಥಾನ ಕಳೆದುಕೊಂಡಿದ್ದ ಜೆಕ್ ಗಣರಾಜ್ಯದ ಜೇಕಬ್ ವಡ್ಲೆಚ್ (88.38 ಮೀ) ಈ ಬಾರಿ ಅಗ್ರಸ್ಥಾನ ಪಡೆದರು. ಅವರು ಕಳೆದ ಋತುವಿನ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದಾರೆ. ಅಲ್ಲದೆ, ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (86.62 ಮೀ) ಮೂರನೇ ಸ್ಥಾನ ಪಡೆದರು. ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಜೇನ (76.31 ಮೀ) ನಿರಾಸೆ ಮೂಡಿಸಿದರು. ಅವರು ಒಂಬತ್ತನೇ ಸ್ಥಾನ ಪಡೆದರು.
ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದು ಕೊಟ್ಟ ಚೋಪ್ರಾ ಅವರ ಈವರೆಗಿನ ಶ್ರೇಷ್ಠ ಸಾಧನೆ 89.94 ಮೀ. (2022) ಆಗಿದೆ. ಅವರು 90 ಮೀಟರ್ ಗಡಿ ದಾಟುವ ವಿಶ್ವಾಸದೊಂದಿಗೆ ಈ ಋತುವಿನಲ್ಲಿ ಮೊದಲ ಬಾರಿ ಕಣಕ್ಕೆ ಇಳಿದಿದ್ದರು. ಆದರೆ, ಮೊದಲ ಲೆಗ್‌ನಲ್ಲಿ ಅದು ಈಡೇರಲಿಲ್ಲ.
‘ನನಗೆ ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ಅತ್ಯಂತ ಪ್ರಮುಖ ಸ್ಪರ್ಧೆಯಾಗಿದೆ. ಅದರೊಂದಿಗೆ ಡೈಮಂಡ್ ಲೀಗ್‌ನ ಕೂಟಗಳೂ ಮುಖ್ಯವಾಗಿದೆ. ಇದು ಈ ಋತುವಿನಲ್ಲಿ ಆರಂಭಿಕ ಸ್ಪರ್ಧೆಯಾಗಿತ್ತು. ಕಡಿಮೆ ಅಂತರದಲ್ಲಿ ಅಗ್ರಸ್ಥಾನ ತಪ್ಪಿಸಿಕೊಂಡೆ. ಮುಂದಿನ ಲೆಗ್‌ನಲ್ಲಿ ಸಾಮರ್ಥ್ಯ ಸುಧಾರಿಸುವತ್ತ ಗಮನ ಹರಿಸುವೆ’ ಎಂದು ಚೋಪ್ರಾ ಸ್ಪರ್ಧೆಯ ನಂತರ ಪ್ರತಿಕ್ರಿಯಿಸಿದರು.
‘ಕತಾರ್‌ನಲ್ಲಿರುವ ಭಾರತೀಯರಿಂದ ಸಿಗುತ್ತಿರುವ ಬೆಂಬಲ ಯಾವಾಗಲೂ ಅದ್ಭುತವಾದುದು. ಅವರ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಲು ನನ್ನಲ್ಲಿ ಪದಗಳಿಲ್ಲ. ನಾನು ಭಾರತೀಯ ಎನ್ನಲು ನಿಜವಾಗಿಯೂ ಹೆಮ್ಮೆಪಡುತ್ತೇನೆ’ ಎಂದು ಹೇಳಿದರು.
2024ರ ಡೈಮಂಡ್ ಲೀಗ್ ಸರಣಿಯಲ್ಲಿ ದೋಹಾ ಲೆಗ್ ಮೂರನೇ ಕೂಟವಾಗಿದ್ದು, ವಿಶ್ವದ ನಾಲ್ಕು ಖಂಡಗಳಲ್ಲಿ ಒಟ್ಟು 15 ಲೆಗ್‌ಗಳು ನಡೆಯುತ್ತವೆ. ಪ್ಯಾರಿಸ್ ಲೆಗ್ ಜುಲೈ 7ರಂದು ನಡೆಯಲಿದ್ದು, ಅಲ್ಲಿ ಮತ್ತೆ ಚೋಪ್ರಾ ಕಣಕ್ಕೆ ಇಳಿಯುವರು. ಸೆ.13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ಡೈಮಂಡ್ ಲೀಗ್ ಫೈನಲ್ ಸ್ಪರ್ಧೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.