ನೀರಜ್ ಚೋಪ್ರಾ
ನವದೆಹಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಜೋಪ್ರಾ ಅವರು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ಬುಧವಾರ ನಡೆದ ಪೋಚ್ ಆಹ್ವಾನ ಟ್ರ್ಯಾಕ್ ಕೂಟದಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಋತುವನ್ನು ಯಶಸ್ಸಿನೊಡನೆ ಆರಂಭಿಸಿದರು.
ಆರು ಮಂದಿಯಿದ್ದ ಅಂತಿಮ ಕಣದಲ್ಲಿ ನೀರಜ್ ಅವರು ಜಾವೆಲಿನ್‌ಅನ್ನು 84.52 ಮೀ. ದೂರ ಎಸೆದರು. ಆತಿಥೇಯ ದಕ್ಷಿಣ ಆಫ್ರಿಕದ 25 ವರ್ಷ ವಯಸ್ಸಿನ ಡೂವ್ ಸ್ಮಿತ್ 82.44 ಮೀ. ಎಸೆತದೊಡನೆ ಎರಡನೇ ಸ್ಥಾನ ಗಳಿಸಿದರು. ಈ ಸ್ಪರ್ಧೆಯು ವಿಶ್ವ ಅಥ್ಲೆಟಿಕ್ಸ್‌ನ ಕಾಂಟಿನೆಂಟಲ್ ಟೂರ್ ಚಾಲೆಂಜರ್‌ನ ಭಾಗವಾಗಿದೆ.
ಆದರೆ ಇಲ್ಲಿ ಅವರು ದಾಖಲಿಸಿದ ದೂರವು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (89.94 ಮೀ.) ಕಡಿಮೆಯಾಗಿದೆ. ಡೂವ್ ಅವರ ಶ್ರೇಷ್ಠ ಸಾಧನೆ 83.29 ಮೀ. ಆಗಿದೆ. ಇವರಿಬ್ಬರನ್ನು ಬಿಟ್ಟರೆ ಉಳಿದ ನಾಲ್ವರು 80 ಮೀ.ಗಿಂತ ದೂರ ಎಸೆಯಲು ವಿಫಲರಾದರು. ದಕ್ಷಿಣ ಆಫ್ರಿಕಾದ ಮತ್ತೊಬ್ಬ ಸ್ಪರ್ಧಿ ಡಂಕನ್ ರಾಬರ್ಟ್‌ಸನ್ (71.22 ಮೀ.) ಮೂರನೇ ಸ್ಥಾನ ಗಳಿಸಿದರು.
27 ವರ್ಷ ವಯಸ್ಸಿನ ಚೋಪ್ರಾ ಅವರು ಹೊಸ ಕೋಚ್, ಝಕ್ ರಿಪಬ್ಲಿಕ್‌ನ ಯಾನ್ ಜೆಲೆಜ್ನಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಜೆಲೆಜ್ನಿ ಅವರು ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ. ವಿಶ್ವದಾಖಲೆ ಕೂಡ ಹೊಂದಿದ್ದವರು. ಈ ಹಿಂದೆ ಅವರಿಗೆ ಜರ್ಮನಿಯ ಕ್ಲಾಸ್ ಬಾರ್ತೊನೀಟ್ಜ್ ಕೂಚ್ ಆಗಿದ್ದರು.
ಚೋಪ್ರಾ ಮೇ 16ರಂದು ನಡೆಯಲಿರುವ ದೋಹಾ ಡೈಮಂಡ್ ಲೀಗ್‌ನಲ್ಲಿ ಕಣಕ್ಕಳಿಯಲಿದ್ದಾರೆ.‘
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.