ADVERTISEMENT

ಒಲಿಂಪಿಯನ್‌ಗಳಾದ ಶ್ರೀಹರಿ ನಟರಾಜ್‌, ಧಿನಿಧಿ ದೇಸಿಂಗು ಕಣದಲ್ಲಿ

8, 9ರಂದು ನೆಟ್ಟಕಲ್ಲಪ್ಪ ಈಜು ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 19:50 IST
Last Updated 4 ನವೆಂಬರ್ 2025, 19:50 IST
ನೆಟ್ಟಕಲ್ಲಪ್ಪ ಈಜು ಕೇಂದ್ರದ ಕಾರ್ಯನಿರ್ವಾಹಕ ವ್ಯವಸ್ಥಾಪಕ ವಿನೋದ್‌ ಕುಮಾರ್‌, ಲೀಡ್‌ ಕೋಚ್‌ ಶರತ್‌ ಚಂದ್ರ, ಮುಖ್ಯಸ್ಥ ವರುಣ್‌ ನಿಜಾವನ್‌, ಕೆ.ಎನ್‌.ಗುರುಸ್ವಾಮಿ ಟ್ರಸ್ಟ್‌ನ ಅನಿಲ್‌ ನಾಯರ್‌, ಲೀಡ್‌ ಕೋಚ್‌ ಅಂಕುಷ್‌ ಕೆ. ಹಾಗೂ ಹಿರಿಯ ಮೇಲ್ವಿಚಾರಕ ಜಿಜೇಶ್‌ ಜಯನ್‌ ಅವರು ಸುದ್ದಿಗೋಷ್ಠಿಯಲ್ಲಿ ಪೋಸ್ಟರ್‌ ಅನಾವರಣ ಮಾಡಿದರು –ಪ್ರಜಾವಾಣಿ ಚಿತ್ರ
ನೆಟ್ಟಕಲ್ಲಪ್ಪ ಈಜು ಕೇಂದ್ರದ ಕಾರ್ಯನಿರ್ವಾಹಕ ವ್ಯವಸ್ಥಾಪಕ ವಿನೋದ್‌ ಕುಮಾರ್‌, ಲೀಡ್‌ ಕೋಚ್‌ ಶರತ್‌ ಚಂದ್ರ, ಮುಖ್ಯಸ್ಥ ವರುಣ್‌ ನಿಜಾವನ್‌, ಕೆ.ಎನ್‌.ಗುರುಸ್ವಾಮಿ ಟ್ರಸ್ಟ್‌ನ ಅನಿಲ್‌ ನಾಯರ್‌, ಲೀಡ್‌ ಕೋಚ್‌ ಅಂಕುಷ್‌ ಕೆ. ಹಾಗೂ ಹಿರಿಯ ಮೇಲ್ವಿಚಾರಕ ಜಿಜೇಶ್‌ ಜಯನ್‌ ಅವರು ಸುದ್ದಿಗೋಷ್ಠಿಯಲ್ಲಿ ಪೋಸ್ಟರ್‌ ಅನಾವರಣ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಖ್ಯಾತನಾಮ ಈಜುಪಟುಗಳು ಪೈಪೋಟಿ ನಡೆಸಲಿರುವ ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ಗೆ ವೇದಿಕೆ ಸಿದ್ಧವಾಗಿದೆ.  ಈ ಪ್ರತಿಷ್ಠಿತ ಈಜು ಕೂಟವು ಇದೇ 8 ಮತ್ತು 9ರಂದು ನಡೆಯಲಿದೆ.

ದೇಶದ ವಿವಿಧೆಡೆಯಿಂದ 300 ಈಜುಪಟುಗಳು ಈ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಪಿಯನ್ ಈಜುಪಟುಗಳಾದ  ಬೆಂಗಳೂರಿನ ಶ್ರೀಹರಿ ನಟರಾಜ್ ಮತ್ತು ದಿನಿಧಿ ದೇಸಿಂಗು ಪ್ರಮುಖ ಆಕರ್ಷಣೆಯಾಗಿದ್ದಾರೆ.  ಅಂತರರಾಷ್ಟ್ರೀಯ ಮತ್ತು ದೇಶದ ಉದಯೋನ್ಮುಖ ಈಜುಪಟುಗಳು ಕಣಕ್ಕಿಳಿಯಲಿದ್ದಾರೆ.

‘ಈ ಬಾರಿ ಒಟ್ಟು ಪ್ರಶಸ್ತಿ ಮೊತ್ತವನ್ನು ₹10.50 ಲಕ್ಷಕ್ಕೆ ಏರಿಸಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ  ಉತ್ತಮ ಸಾಧನೆ ಮಾಡುವವರಿಗೆ ಅತ್ಯಮೂಲ್ಯ ಈಜುಪಟು ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ ₹25 ಸಾವಿರ ನಗದು ಬಹುಮಾನ ಹೊಂದಿದೆ’  ಎಂದು ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ) ಮುಖ್ಯಸ್ಥ ವರುಣ್ ನಿಜಾವನ್ ಅವರು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ADVERTISEMENT

‘ಈ ಕೂಟದ ಪ್ರಮುಖ ಆಕರ್ಷಣೆಯೆಂದರೆ ಸ್ಕಿನ್ಸ್‌ ವಿಭಾಗದ ಸ್ಪರ್ಧೆಗಳು. ಅತ್ಯಂತ ರೋಚಕವಾದ ಸ್ಪರ್ಧೆ ಇದಾಗಿದೆ. ಯುರೋಪ್, ಅಮೆರಿಕದಲ್ಲಿ ಇದು ಬಹಳ ಪ್ರಚಲಿತದಲ್ಲಿದೆ. ಭಾರತದಲ್ಲಿ ಸತತ ನಾಲ್ಕನೇ ವರ್ಷ ಈ ವಿಭಾಗದ ಸ್ಪರ್ಧೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ನಾಕೌಟ್ ಮಾದರಿಯ ಸ್ಪರ್ಧೆಯಾಗಿದ್ದು, ಈಜುಪಟುಗಳ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ’ ಎಂದೂ ವರುಣ್ ವಿವರಿಸಿದರು. 

ಪದ್ಮನಾಭನಗರದಲ್ಲಿರುವ ‘ಕೆ.ಎ. ನೆಟ್ಟಕಲ್ಲಪ್ಪ ಈಜು ಕೇಂದ್ರ’ದಲ್ಲಿ ಸ್ಪರ್ಧೆಗಳು ನಡೆಯಲಿವೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಈಜು ಕೋಚ್‌ ಪ್ರದೀಪ್‌ಕುಮಾರ್‌ ಅವರು  8ರಂದು ಸಂಜೆ 4.30ಕ್ಕೆ ಕೂಟಕ್ಕೆ ಚಾಲನೆ ನೀಡಲಿದ್ದಾರೆ.

‘ಅತ್ಯಾಧುನಿಕ ಹಾಗೂ ಸುಸಜ್ಜಿತ ಮೂಲಸೌಲಭ್ಯಗಳನ್ನು ಹೊಂದಿರುವ ಎನ್‌ಸಿಎಯಲ್ಲಿ ಮೂರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕೂಟವು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಮುಂದಿನ ಆವೃತ್ತಿಯ ಕೂಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿ, ಈಶಾನ್ಯ ಏಷ್ಯಾ ರಾಷ್ಟ್ರಗಳ ಈಜುಪಟುಗಳನ್ನು ಆಹ್ವಾನಿಸುವ ಯೋಜನೆ ಇದೆ’ ಎಂದು ವರುಣ್‌  ತಿಳಿಸಿದರು.

'ಟೈಮ್ ಟ್ರಯಲ್ಸ್ ಮಾದರಿಯ 100ಮೀ, 400 ಮೀ ವಿಭಾಗಗಳ ವಿಜೇತರಿಗೆ 8 ಸಾವಿರ (ಚಿನ್ನ), 6 ಸಾವಿರ (ಬೆಳ್ಳಿ) ಮತ್ತು 4 ಸಾವಿರ (ಕಂಚು) ನಗದು ಪ್ರಶಸ್ತಿ ನೀಡಲಾಗುವುದು. ಸ್ಕಿನ್ಸ್ ಫೈನಲ್ ತಲುಪಿದ ಎಲ್ಲರಿಗೂ ನಗದು ಪುರಸ್ಕಾರ ನೀಡಲಾಗುವುದು’ ಎಂದು ವರುಣ್ ತಿಳಿಸಿದರು.

‘ಈ ಸಲ ಶ್ರೀಹರಿ, ಧಿನಿಧಿ ಅವರಲ್ಲದೇ ಎಸ್‌. ದರ್ಶನ್, ಎಸ್‌. ದಕ್ಷಣ್, ರುಜುಲಾ, ಮಣಿಕಂಠ ಅವರು ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಪ್ರಮುಖರು’ ಎಂದು ಲೀಡ್‌ ಕೋಚ್ ಅಂಕುಷ್‌ ಕೆ. ತಿಳಿಸಿದರು.

ಸ್ಕಿನ್ಸ್‌,  100 ಮೀಟರ್ಸ್, 200 ಮೀಟರ್ಸ್ ಮತ್ತು 400 ಮೀಟರ್ಸ್ ವಿಭಾಗಗಳ ಲಾಂಗ್‌ ಕೋರ್ಸ್‌ ಸ್ಪರ್ಧೆಗಳು ನಡೆಯಲಿವೆ. ನಾಕೌಟ್‌ ಮಾದರಿಯ ಸ್ಕಿನ್ಸ್‌ ವಿಭಾಗದ ಸ್ಪರ್ಧೆಗಳು ಈ ಸಲವೂ ಈಜುಪಟುಗಳನ್ನು ಆಕರ್ಷಿಸಲಿವೆ. ಎರಡೂ ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 7ರವರೆಗೆ ಸ್ಪರ್ಧೆಗಳು ನಡೆಯಲಿವೆ.

ಹೆಚ್ಚಿನ ಮಾಹಿತಿಗೆ https://nac.org.inಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.