ಪ್ಯಾರಿಸ್: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರು ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಇಲ್ಲಿಯ ನಾರ್ತ್ ಪ್ಯಾರಿಸ್ ಅರೇನಾದಲ್ಲಿ ಭಾನುವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ ಭಾರತದ 28 ವರ್ಷ ವಯಸ್ಸಿನ ಜರೀನ್ 5–0 ಅಂತರದಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು ಮಣಿಸಿದರು.
ಪಂದ್ಯದ ಆರಂಭದಲ್ಲೇ ಜರ್ಮನಿಯ ಸ್ಪರ್ಧಿ ಆಕ್ರಮಣಕಾರಿ ಆಟಕ್ಕೆ ಇಳಿದರು. ನಂತರದಲ್ಲಿ ಲಯ ಕಂಡುಕೊಂಡ ಭಾರತದ ಬಾಕ್ಸರ್ ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲೂ ತುರುಸಿನ ಸ್ಪರ್ಧೆ ನಡೆಯಿತು. ಆದರೆ, ಜರೀನ್ ತಂತ್ರಗಾರಿಕೆಯ ಮುಂದೆ ಜರ್ಮನಿಯ ಆಟಗಾರ್ತಿ ತಬ್ಬಿಬ್ಬಾದರು. ಜರೀನ್ ನಿಖರವಾದ ಪಂಚ್ ನೀಡುವುದನ್ನು ಮುಂದುವರೆಸಿ, ಅಧಿಕಾರಯುತ ಗೆಲುವು ದಕ್ಕಿಸಿಕೊಂಡರು.
ಜರೀನ್ ಅವರಿಗೆ ಮುಂದಿನ ಸುತ್ತಿನಲ್ಲಿ ಪ್ರಬಲ ಸ್ಪರ್ಧಿಯ ಸವಾಲು ಎದುರಾಗಿದೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಹಾಲಿ ವಿಶ್ವ ಚಾಂಪಿಯನ್ ವಿ ಯು (ಚೀನಾ) ಅವರೊಂದಿಗೆ ಗುರುವಾರ ಮುಖಾಮುಖಿಯಾಗಲಿದ್ದಾರೆ.
ಜರೀನ್, ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಎರಡನೇ ಬಾಕ್ಸರ್ ಆಗಿದ್ದಾರೆ. ಶನಿವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಅವರು ಮಹಿಳೆಯರ 54 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.