ಬ್ಯಾಂಕಾಕ್: ಭಾರತದ ನಿಶಾಂತ್ ದೇವ್ ಅವರು ಮಂಗಳವಾರ ನಡೆದ ಒಲಿಂಪಿಕ್ಸ್ ಬಾಕ್ಸಿಂಗ್ ವಿಶ್ವ ಕ್ವಾಲಿಫೈಯರ್ ಟೂರ್ನಿಯ 71 ಕೆ.ಜಿ ವಿಭಾಗದಲ್ಲಿ ಮಂಗೋಲಿಯಾದ ಒಟ್ಗೊನ್ಬಾಟರ್ ಅವರನ್ನು ಕೇವಲ ಎರಡು ನಿಮಿಷಗಳಲ್ಲಿ ಸೋಲಿಸಿ ಪ್ರಿ ಕ್ವಾಟರ್ ಫೈನಲ್‌ಗೆ ಪ್ರವೇಶಿಸಿದರು. ಮತ್ತೊಬ್ಬ ಬಾಕ್ಸರ್ ಅವಿನಾಶ್ ಜಮ್ವಾಲ್ ಸೋತು ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ.
ಹಿಂದಿನ ಅರ್ಹತಾ ಪಂದ್ಯಗಳಲ್ಲಿ ಒಲಿಂಪಿಕ್ಸ್ ಅರ್ಹತೆಯನ್ನು ಸ್ಪಲ್ಪದರಲ್ಲೇ ತಪ್ಪಿಸಿಕೊಂಡಿದ್ದ ದೇವ್, ಆರಂಭದಿಂದಲೇ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಆಕರ್ಷಕ ಪಂಚ್‌ಗಳ ಮೂಲಕ ಎದುರಾಳಿ ಒಟ್ಗೊನ್ಬಾಟರ್ ಬೈಂಬಾ–ಎರ್ಡೆನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಮೊದಲ ಸುತ್ತು ಮುಗಿಯಲು ಇನ್ನೂ 58 ಸೆಕೆಂಡುಗಳು ಬಾಕಿ ಇರುವಾಗ ರೆಫರಿ ಈ ಬೌಟ್ ಸ್ಥಗಿತಗೊಳಿಸಿದರು.
ಇದಕ್ಕೂ ಮುನ್ನ ನಡೆದ 63.5 ಕೆ.ಜಿ ವಿಭಾಗದಲ್ಲಿ ಕೊಲಂಬಿಯಾದ ಜೋಸ್ ಮ್ಯಾನುಯೆಲ್ ವೈಫರಾ ಫೋರ್ ವಿರುದ್ಧ ಮೊದಲ ಸುತ್ತಿನಲ್ಲಿ ಸೋತ ಅಭಿನಾಶ್ ಉತ್ತಮ ಹೋರಾಟ ನಡೆಸಿದರು. ಅವರು ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿದರು.
ನಿಯಮಗಳ ಪ್ರಕಾರ ಸ್ಪರ್ಧಿಗಳ ಅಂಕಗಳು ಸಮನಾದ ಕಾರಣ ವಿಜೇತರನ್ನು ನಿರ್ಧರಿಸಲು ತೀರ್ಪುಗಾರರನ್ನು ಕೇಳಲಾಯಿತು. ದೀರ್ಘ ಚರ್ಚೆಯ ನಂತರ ಜೋಸ್ ಪರವಾಗಿ ಮತ ಚಲಾಯಿಸಿದರು. ಕೊಲಂಬಿಯಾ ಸ್ಪರ್ಧಿ ಗೆದ್ದರು.
ಭಾರತದ ಮೂರನೇ ಬಾಕ್ಸರ್ ಸಚಿನ್ ಸಿವಾಚ್ 57 ಕೆ.ಜಿ ವಿಭಾಗದಲ್ಲಿ ಡೆನ್ಮಾರ್ಕ್‌ನ ಫ್ರೆಡೆರಿಕ್ ಜೆನ್ಸನ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.