ADVERTISEMENT

ಮಂಗಳೂರು ಚೆಸ್ ಟೂರ್ನಿ: ಅಗ್ರಸ್ಥಾನದಲ್ಲಿ ಕೇರಳದ ನಿತಿನ್‌ ಬಾಬು

ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್ ಕ್ಲಾಸಿಕಲ್ ಚೆಸ್ ಟೂರ್ನಿ: ಕೊನೆಯ ದಿನ ಕಣದಲ್ಲಿ ಕುತೂಹಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 16:05 IST
Last Updated 29 ಸೆಪ್ಟೆಂಬರ್ 2025, 16:05 IST
ನಿತಿನ್ ಬಾಬು
ನಿತಿನ್ ಬಾಬು   

ಮಂಗಳೂರು: ಇಂಟರ್‌ನ್ಯಾಷನಲ್ ಮಾಸ್ಟರ್‌ಗೆ ದಿನದ ಕೊನೆಯ ಸುತ್ತಿನಲ್ಲಿ ಆಘಾತ ನೀಡಿದ ಕೇರಳದ ನಿತಿನ್ ಬಾಬು ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್ ಅಂತರರಾಷ್ಟ್ರೀಯ ಕ್ಲಾಸಿಕಲ್ ಚೆಸ್ ಟೂರ್ನಿಯಲ್ಲಿ ಸೋಮವಾರ ಅಗ್ರಸ್ಥಾನಕ್ಕೇರಿದ್ದಾರೆ.

ನಗರದ ಶಾರದಾ ಕಾಲೇಜು ಆವರಣದಲ್ಲಿ ರಾವ್ಸ್‌ ಚೆಸ್ ಕಾರ್ನರ್ ಆಯೋಜಿರುವ ಟೂರ್ನಿಯ‌ 7 ಸುತ್ತುಗಳ ಮುಕ್ತಾಯಕ್ಕೆ ನಿತಿನ್ ಅಜೇಯರಾಗಿ ಉಳಿದಿದ್ದು ಪೂರ್ಣ ಪಾಯಿಂಟ್‌ಗಳೊಂದಿಗೆ ಮುನ್ನಡೆ ಗಳಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರ ಕೊನೆಯ ಎರಡು ಸುತ್ತುಗಳ ಸ್ಪರ್ಧೆ ನಡೆಯಲಿದ್ದು ನಿತಿನ್‌ ಮತ್ತು ಕೇರಳದ ಕ್ರಿಸ್ಟಿ ಜಾರ್ಜ್‌ ನಡುವಿನ 8ನೇ ಸುತ್ತಿನ ಪಂದ್ಯ ಕುತೂಹಲ ಕೆರಳಿಸಿದೆ. ಕ್ರಿಸ್ಟಿ 6.5 ಪಾಯಿಂಟ್ ಗಳಿಸಿರುವ ಏಕೈಕ ಆಟಗಾರ ಆಗಿದ್ದಾರೆ. 

ಎರಡನೇ ಶ್ರೇಯಾಂಕಿತ, ಗೋವಾದ ಲಾಡ್‌ ಮಂದಾರ್ ಪ್ರದೀಪ್, ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ತಮಿಳುನಾಡಿನ ಮುರಳಿಕೃಷ್ಣ ಬಿ.ಟಿ (7ನೇ ಶ್ರೇಯಾಂಕ), ಸರವಣ ಕೃಷ್ಣನ್ ಪಿ (3ನೇ ಶ್ರೇಯಾಂಕ) ಮತ್ತು ಅರೆನಾ ಇಂಟರ್‌ನ್ಯಾಷನಲ್ ಮಾಸ್ಟರ್‌ ದಕ್ಷಿಣ ಕನ್ನಡದ ಪಂಕಜ್ ಭಟ್‌ (26ನೇ ಶ್ರೇಯಾಂಕ) ಒಳಗೊಂಡಂತೆ 15 ಮಂದಿ 6 ಪಾಯಿಂಟ್‌ಗಳೊಂದಿಗೆ ಕಣದಲ್ಲಿದ್ದಾರೆ. 

ADVERTISEMENT

7ನೇ ಸುತ್ತಿನಲ್ಲಿ ತಲಾ 6 ಪಾಯಿಂಟ್‌ಗಳೊಂದಿಗೆ ನಿತಿನ್ ಬಾಬು ಮತ್ತು ಮುರಳಿಕೃಷ್ಣ ಟಾಪ್‌ ಬೋರ್ಡ್‌ನಲ್ಲಿ ಆಡಿದರು. 2297 ರೇಟಿಂಗ್ ಪಾಯಿಂಟ್ ಹೊಂದಿರುವ ನಿತಿನ್‌ಗೆ 2080 ರೇಟಿಂಗ್‌ನ ಮರುಳಿ ವಿರುದ್ಧ ಜಯ ಗಳಿಸಲು ಪ್ರಯಾಸವಾಗಲಿಲ್ಲ. ಎರಡನೇ ಬೋರ್ಡ್‌ನಲ್ಲಿ ಕ್ರಿಸ್ಟಿ ಎದುರು ಗೆಲುವಿನತ್ತ ದಾಪುಗಾಲು ಹಾಕಿದ್ದ ಕರ್ನಾಟಕದ ಪ್ರಣವ್ ಎ.ಜೆ ‘ಟೈಮ್‌ ಲಾಸ್‌’ ಆಗಿ ಆಘಾತ ಅನುಭವಿಸಿದರು. ಕೇರಳದ ಸಾವಂತ್‌ ಕುಮಾರ್ ಮತ್ತು ತಮಿಳುನಾಡಿನ ದಿನೇಶ್ ಕುಮಾರ್ ಜಗನ್ನಾಥನ್ ಮೂರನೇ ಬೋರ್ಡ್‌ನಲ್ಲಿ ಡ್ರಾ ಮಾಡಿಕೊಂಡರು. 

ಮಣಿಪುರದ ವಿಕ್ರಂ ಜೀತ್ ಸಿಂಗ್, ಅರೆನಾ ಇಂಟರ್‌ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ದೀಪಿಕಾ ಕೆ.ಪಿ ಅವರನ್ನು, ದಕ್ಷಿಣ ಕನ್ನಡದ ಪಂಕಜ್ ಭಟ್‌ ಕರ್ನಾಟಕದ ನಿಶಾಂತ್ ಡಿಸೋಜ ಅವರನ್ನು, ಲಾಡ್ ಮಂದಾರ್ ಪ್ರದೀಪ್ ಕೇರಳದ ಸಂದೀಪ್ ಸಂತೋಷ್ ಅವರನ್ನು, ಸರವಣ ಕೃಷ್ಣನ್ ಕರ್ನಾಟಕದ ಧನುಷ್ ರಾಮ್ ಅವರನ್ನು, ತಮಿಳುನಾಡಿನ ತರುಣಿಕಾ ತಮ್ಮದೇ ರಾಜ್ಯದ ಪ್ರತೀತಿ ನಾರಾಯಣ್ ಅವರನ್ನು, ಕೆನಡಾದ ಮುತ್ಯಾಳಪತಿ ಮೋದಿತ್ ಆರೋಹ್ ದಕ್ಷಿಣ ಕನ್ನಡದ ಲಕ್ಷಿತ್ ಬಿ.ಸಾಲಿಯಾನ್ ಅವರನ್ನು, ತಮಿಳುನಾಡಿನ ಕಾಘವ್ ಕಪಿಲ್ ತಮ್ಮದೇ ರಾಜ್ಯದ ನಿಖಿಲ್ ಟಿ.ಎಲ್ ಅವರನ್ನು, ತಮಿಳುನಾಡಿನ ಕಿಶೋರ್ ವಿ, ಕರ್ನಾಟಕದ ಅದ್ವೈತ್ ರತ್ನಾಕರ್ ವಿಭೂತೆ ಅವರನ್ನು ಮಣಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.