ADVERTISEMENT

ಡೈಮಂಡ್‌ ಲೀಗ್‌ನಲ್ಲಿ ಅಗ್ರ ಸ್ಥಾನ ಪಡೆದ ನೀರಜ್‌ಗೆ ಗಡ್ಕರಿ ಸೇರಿ ಗಣ್ಯರ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2022, 7:03 IST
Last Updated 27 ಆಗಸ್ಟ್ 2022, 7:03 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ನವದೆಹಲಿ: ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರನ್ನು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

‘ಚಾಂಪಿಯನ್ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಒಲಿಂಪಿಕ್ ಹೀರೋ ನೀರಜ್‌ ಚೋಪ್ರಾ ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಜಯಗಳಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಕೋಟ್ಯಂತರ ಹೃದಯಗಳ ಹಾರೈಕೆ ಅವರ ಪರ ಇದೆ’ ಎಂದು ಗಡ್ಕರಿ ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಉಲ್ಲೇಖಿಸಿದ್ದಾರೆ.

‘ಜಾವೆಲಿನ್‌ ಥ್ರೋದಲ್ಲಿ 89.04 ಮೀ. ಸಾಧನೆಯೊಂದಿಗೆ ಡೈಮಂಡ್‌ ಲೀಗ್‌ನಲ್ಲಿ ಭಾರತ ಪರ ಮೊದಲ ಬಾರಿ ಅಗ್ರ ಸ್ಥಾನ ಪಡೆದ ನೀರಜ್‌ ಚೋಪ್ರಾಗೆ ಅಭಿನಂದನೆಗಳು’ ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ 89.04 ಮೀ. ಸಾಧನೆಯೊಂದಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.