ADVERTISEMENT

ಸವಾಲು ಇದೆ; ಆದರೂ ಒಲಿಂಪಿಕ್ಸ್ ನಿಲ್ಲದು: ಒಲಿಂಪಿಕ್ ಸಮಿತಿಯ ಉಪಾಧ್ಯಕ್ಷರ ವಿಶ್ವಾಸ

ಏಜೆನ್ಸೀಸ್
Published 8 ಮೇ 2021, 13:13 IST
Last Updated 8 ಮೇ 2021, 13:13 IST
ಒಲಿಂಪಿಕ್ಸ್‌ ಅಂಗವಾಗಿ ಟೋಕಿಯೊದಲ್ಲಿ ಶನಿವಾರ ನಡೆದ ರಿಥಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಪದಕಗಳನ್ನು ಗೆದ್ದವರು ಸಂಭ್ರಮಪಟ್ಟರು –ಎಎಫ್‌ಪಿ ಚಿತ್ರ
ಒಲಿಂಪಿಕ್ಸ್‌ ಅಂಗವಾಗಿ ಟೋಕಿಯೊದಲ್ಲಿ ಶನಿವಾರ ನಡೆದ ರಿಥಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಪದಕಗಳನ್ನು ಗೆದ್ದವರು ಸಂಭ್ರಮಪಟ್ಟರು –ಎಎಫ್‌ಪಿ ಚಿತ್ರ   

ಸಿಡ್ನಿ: ಕೋವಿಡ್‌ನಿಂದ ಉಂಟಾಗಿರುವ ವಿಷಮ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್ ನಡೆಸುವುದು ಸವಾಲೇ ಸರಿ. ಆದರೆ ಜಗತ್ತಿನ ಯಾವ ಶಕ್ತಿಗೂ ಈ ಕ್ರೀಡಾಕೂಟವನ್ನು ರದ್ದು ಮಾಡಿಸುವ ಶಕ್ತಿ ಇಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಕ್ ಸಮಿತಿಯ ಉಪಾಧ್ಯಕ್ಷ ಜಾನ್ ಕೋಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಸಿಡ್ನಿಯಲ್ಲಿ ಮಾತನಾಡಿದ ಅವರು ಆಟಗಾರರ ಸುರಕ್ಷತೆಗಾಗಿ ಕೈಗೊಳ್ಳಬೇಕಾಗಿರುವ ಎಲ್ಲ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದ ಜಪಾನ್ ಪ್ರಧಾನಮಂತ್ರಿ ಯೊಶಿಹಿಡೆ ಸೂಗ ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.

ಜುಲೈ 23ರಂದು ಆರಂಭವಾಗುವ ಒಲಿಂಪಿಕ್ಸ್ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಸೂಗ ಅವರು ಏಪ್ರಿಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಕೋವಿಡ್‌ ನಿಯಂತ್ರಿಸಲು ಮತ್ತು ಕ್ರೀಡಾಪಟುಗಳಿಗೆ ಸೋಂಕು ತಗುಲದಂತಿರಲು ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು ಸುರಕ್ಷಿತವಾಗಿ ಒಲಿಂಪಿಕ್ಸ್ ಆಯೋಜಿಸಲು ಬದ್ಧರಾಗಿರುವುದಾಗಿ ಈ ಸಂದರ್ಭದಲ್ಲಿ ಸೂಗ ಭರವಸೆ ನೀಡಿದ್ದಾರೆ.

ADVERTISEMENT

ಆದರೆ ಟೋಕಿಯೊ ಸೇರಿದಂತೆ ಜಪಾನ್‌ನ ವಿವಿಧ ಭಾಗಗಳಲ್ಲಿ ವೈರಸ್ ಸೃಷ್ಟಿಸಿರುವ ಆತಂಕದಿಂದಾಗಿ ತುರ್ತು ಪರಿಸ್ಥಿತಿಯನ್ನು ಹೇರಿರುವ ಹಿನ್ನೆಲೆಯಲ್ಲಿ ಕೂಟವನ್ನು ನಡೆಸುವ ಬಗ್ಗೆ ಸಂದೇಹಗಳು ಎದ್ದಿವೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಕೋಟ್ಸ್‌ ‘ಒಲಿಂಪಿಕ್ಸ್‌ಗೆ ಕೋವಿಡ್‌ನಿಂದ ಯಾವ ಆತಂಕವೂ ಇಲ್ಲ’ ಎಂದರು.

ಅಮೆರಿಕದ ವೈದ್ಯ ಔಷಧಿ ಕಂಪನಿ ಫಿಜರ್ ಮತ್ತು ಅದರ ಜರ್ಮನ್‌ ಪಾಲುದಾರ ಬಯಾನ್‌ಟೆಕ್‌, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಲಸಿಕೆ ಒದಗಿಸುವ ಸಂಬಂಧ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಗುರುವಾರ ಒಪ್ಪಂದ ಮಾಡಿಕೊಂಡಿದೆ. ಆಯಾ ದೇಶಗಳ ಕ್ರೀಡಾ ಸಂಸ್ಥೆಗಳಿಗೆ ಲಸಿಕೆ ಒದಗಿಸಲಾಗುವುದು ಎಂದು ತಿಳಿಸಿದೆ.

ಡೈವಿಂಗ್ ವಿಶ್ವಕಪ್ ಯಶಸ್ಸು

ಕೋವಿಡ್ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಕೆಲವು ಪ್ರಾಯೋಗಿಕ ಸ್ಪರ್ಧೆಗಳು ಮತ್ತು ಅರ್ಹತಾ ಟೂರ್ನಿಗಳನ್ನು ಮುಂದೂಡಲಾಗಿದೆ. ಕೆಲವು ರದ್ದಾಗಿವೆ. ಇನ್ನು ಕೆಲವು ಬೇರೆ ದೇಶಗಳಿಗೆ ಸ್ಥಳಾಂತರಗೊಂಡಿವೆ. ಆದರೆ ಕೆಲವು ಸ್ಪರ್ಧೆಗಳು, ವಿಶೇಷವಾಗಿ ಡೈವಿಂಗ್ ವಿಶ್ವಕಪ್‌ ಟೋಕಿಯೊದಲ್ಲಿ ಯಶಸ್ವಿಯಾಗಿ ನಡೆದಿದೆ.

‘ಈಚೆಗೆ ನಡೆದ ರೋಯಿಂಗ್ ಸ್ಪರ್ಧೆಯೊಂದಲ್ಲಿ ಪಾಲ್ಗೊಂಡಿದ್ದ ಟುನೀಷಿಯಾ ತಂಡದೊಂದಿಗೆ ಇದ್ದ ಅಧಿಕಾರಿಯೊಬ್ಬರಿಗೆ ಕೋವಿಡ್ ಇರುವುದು ದೃಢವಾಗಿತ್ತು. ಕಠಿಣ ಕ್ರಮಗಳ ನಡುವೆ ಅದೊಂದೇ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಕೋಟ್ಸ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.