ADVERTISEMENT

ಹಳೆಯ ಚೆಸ್ ಆಟಗಾರರ ಸಮ್ಮಿಲನವಾಯಿತು: ರವಿಶಂಕರ್ ನುಡಿನಮನ

ನಾಗೇಶ್ ಶೆಣೈ ಪಿ.
Published 6 ಫೆಬ್ರುವರಿ 2025, 15:42 IST
Last Updated 6 ಫೆಬ್ರುವರಿ 2025, 15:42 IST
ನುಡಿನಮನದಲ್ಲಿ ಪಾಲ್ಗೊಂಡವರು...
ನುಡಿನಮನದಲ್ಲಿ ಪಾಲ್ಗೊಂಡವರು...   

ರಾಜ್ಯದಲ್ಲಿ ಈ ಹಿಂದೆ 1970, 1980 ಮತ್ತು 1990ರ ದಶಕಗಳ ವಿವಿಧ ಅವಧಿಗಳಲ್ಲಿ ಚಾಂಪಿಯನ್ ಆಗಿದ್ದ, ಉತ್ತಮ ಆಟದಿಂದ ಹೆಸರು ಗಳಿಸಿದ್ದ ಆಟಗಾರರು ಅಲ್ಲಿ ಸೇರಿದ್ದರು. ಆದರೆ ಹಳೆಯ ಆಟಗಾರರ ಸಮ್ಮಿಲನದ ಕಾರ್ಯಕ್ರಮದ ಉದ್ದೇಶವಂತೂ ಆಯೋಜಕರದ್ದಾಗಿರಲಿಲ್ಲ. ಜನವರಿ ಆರಂಭದಲ್ಲಿ ನಿಧನರಾದ ಚೆಸ್‌ ಆಟಗಾರ ಎಸ್‌.ಎನ್‌.ರವಿಶಂಕರ್ ಅವರಿಗೆ ಆತ್ಮೀಯ ಮಿತ್ರರು ಇತ್ತೀಚೆಗೆ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮವಾಗಿತ್ತದು.

ಮೂರು ಬಾರಿ ರಾಜ್ಯ ಚಾಂಪಿಯನ್ ಆಗಿದ್ದ ರವಿಶಂಕರ್ (71) ಅವರು ಜನವರಿ 8ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದರು. ರಾಷ್ಟ್ರೀಯ ‘ಎ’ ಮತ್ತು ‘ಬಿ’ ಆಟಗಾರರಾಗಿದ್ದ ಅವರು ಕೆಲವೇ ತಿಂಗಳ ಹಿಂದಿನವರೆಗೂ ಅವರು ವೆಟರನ್ಸ್‌ ವಿಭಾಗದಲ್ಲಿ ಆಡಿ ಸಕ್ರಿಯರಾಗಿದ್ದವರು. ಚೆಸ್‌ ಪಝಲ್‌ಗಳನ್ನು (ಸಂಕೀರ್ಣ ಸ್ಥಿತಿಯ ಸಮಸ್ಯೆ ಬಿಡಿಸುವುದಕ್ಕೆ ಸಂಬಂಧಿಸಿ) ಅವರು 1990ರ ದಶಕದಲ್ಲಿ ಹಲವು ರಾಷ್ಟ್ರೀಯ, ಅಂತರರಾಷ್ಟ್ರೀಯ (ಇಂಗ್ಲೆಂಡ್‌, ಜರ್ಮನಿಯ) ಚೆಸ್‌ ಪತ್ರಿಕೆಗಳಿಗೆ ಬರೆದಿದ್ದರು. ಕೆಲವೇ ತಿಂಗಳ ಹಿಂದೆ ಕೇರಳದಲ್ಲಿ ನಡೆದ ಟೂರ್ನಿಯ ವೆಟರನ್ಸ್ ವಿಭಾಗದಲ್ಲಿ ಆಡಿ ಬಹುಮಾನ ಗಳಿಸಿದ್ದರು.

ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಅವರು ಆಟದ ಜೊತೆಗೆ ಹಾಸ್ಯಪ್ರಜ್ಞೆಯಿಂದಲೂ ಗುರುತಿಸಿಕೊಂಡವರು. ಇದೇ ಕಾರಣಕ್ಕೆ ದೊಡ್ಡಸಂಖ್ಯೆಯ ಮಿತ್ರಬಳಗವನ್ನು ಸೃಷ್ಟಿಸಿಕೊಂಡಿದ್ದರು. ಬಹುಶಃ ಇದರಿಂದಾಗಿಯೇ ಅಲ್ಲಿ ಅವರಿಗಿಂತ ಹಿರಿಯ, ಸ್ವಲ್ಪ ಕಿರಿಯ ಆಟಗಾರರು ಸೇರಿದ್ದರು. ಎಲ್ಲರೂ 50 ವರ್ಷ ಮೇಲ್ಪಟ್ಟವರೇ.

ADVERTISEMENT

ಹಿರಿಯ ಆಟಗಾರರಾದ ಪ್ರಸನ್ನ ಪಿಚ್ಚಮುತ್ತು, ಶಂಕರ ರಾಮ್‌, ಪಾರ್ಥಸಾರಥಿ, ಪರ್ವೇಝ್ ಅಬ್ದುಲ್ಲಾ, ಮಾಜಿ ರಾಜ್ಯ ಚಾಂಪಿಯನ್ನರಾದ ಸಾಯಿಪ್ರಕಾಶ್, ರವೀಂದ್ರನ್‌, ಶ್ರೀಧರನ್‌, ಝುಲ್ಪಿಕರ್ ಅಹ್ಮದ್‌, ಟಿ.ಕೆ.ವರ್ಧನ್, ಡೇವಿಡ್‌ ಪದುವಾ, ಎನ್‌.ಎಸ್‌.ಎಸ್‌. ಶಾಸ್ತ್ರಿ, ಅರವಿಂದ ಶಾಸ್ತ್ರಿ, ಎರಡು ಬಾರಿಯ ರಾಜ್ಯ ಮಹಿಳಾ ಚಾಂಪಿಯನ್ ಸುಜಾತಾ, ಕ್ರೀಡಾಭಾರತಿಯ ಪ್ರಕಾಶ್‌ ಸೇರಿದಂತೆ ಕೆಲವು ಹಿರಿಯ ಆಟಗಾರರು ಭಾಗವಹಿಸಿ ರವಿಶಂಕರ್ ಅವರನ್ನು ಸ್ಮರಿಸಿದರು.

ಅವರ ಮಿತ್ರ ಶಂಕರ್‌ ರಾಮ್, 1970ರಿಂದ ರವಿಶಂಕರ್ ಅವರ ವಿವಿಧ ಟೂರ್ನಿಗಳಲ್ಲಿ ಆಡುತ್ತಿದ್ದ, ಸನ್ಮಾನಿತರಾದ, ಬಹುಮಾನ ಪಡೆಯುತ್ತಿದ್ದ ಚಿತ್ರಗಳನ್ನು ಸ್ಲೈಡ್‌ಶೋನಲ್ಲಿ ಪ್ರದರ್ಶಿಸಿದರು. ಅವರು ಸಾಗಿಬಂದ ಹಾದಿಯ ಬಗ್ಗೆ ಮೆಲುಕುಹಾಕಿದರು. ಮಾಜಿ ಚೆಸ್ ಆಟಗಾರ ಶಶಿಧರ್ ರೈ ಅವರೂ ರವಿಶಂಕರ್‌ ಅವರೊಂದಿಗಿನ ಒಡನಾಟವನ್ನು ನೆನಪಿಸಿದರು.

ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರವಿಂದ ಶಾಸ್ತ್ರಿ ಮಾತನಾಡಿ, ‘ನಮ್ಮ ಪಾಲಿಗೆ ರವಿಶಂಕರ್ ಅವರು ‘ಎಂಡ್‌ಗೇಮ್‌ ಸ್ಪೆಷಲಿಸ್ಟ್‌’ ಆಗಿದ್ದರು. ಪಂದ್ಯದ ನಂತರ ವಿಶ್ಲೇಷಣೆ ವೇಳೆ ಹಮ್ಮು ಬಿಮ್ಮು ಇಲ್ಲದೆ ವಿನಯದಿಂದಲೇ ವರ್ತಿಸುತ್ತಿದ್ದರು. ಚೆಸ್‌ನ ಪ್ರಮುಖ ಭಾಗವಾದ ಎಂಡ್‌ಗೇಮ್‌ ಅಂದಾಗ ನಮಗೆಲ್ಲಾ ನೆನಪಾಗುತ್ತಿದ್ದುದು ರವಿಶಂಕರ್‌’ ಎಂದು ಬಣ್ಣಿಸಿದರು.

ಎನ್‌ಎಸ್‌ಎಸ್‌ ಶಾಸ್ತ್ರಿ ಮಾತನಾಡಿ, ಅವರು ಎಂಡ್‌ಗೇಮ್‌ನಲ್ಲಿ ಎರಡನೇ ಶ್ರೇಷ್ಠ ಆಟಗಾರರಾಗಿದ್ದರು. ಒಳ್ಳೆಯ ಸ್ನೇಹಿತ, ತಮಾಷೆಯ ಮಾತುಗಳೂ ಅವರಲ್ಲಿದ್ದವು’ ಎಂದು ನೆನಪಿಸಿದರು. ‘ರಷ್ಯಾದಲ್ಲಿ ಎಷ್ಟು ದೂರ ಸಾಗಿದರೂ ನೀವು ಅದೇ ದೇಶದಲ್ಲಿರುತ್ತೀರಿ. ಅದು ಅಷ್ಟೊಂದು ವಿಶಾಲ. ಬೆಂಗಳೂರಿನಲ್ಲಿ ಎಷ್ಟು ದೂರ ಸಾಗಿದರೂ ನೀವು ಅಲ್ಲೇ ಇರುತ್ತೀರಿ. ಏಕೆಂದರೆ ಅಷ್ಟೊಂದು ಟ್ರಾಫಿಕ್‌ ಜಾಮ್‌’ ಎಂದು ಅವರು ಹೇಳಿದ್ದ ತಮಾಷೆಯ ಪ್ರಸಂಗ ಹಂಚಿಕೊಂಡರು.

ನ್ಯಾಷನಲ್ ಹೈಸ್ಕೂಲ್‌‌ನಲ್ಲಿ ಓದುವಾಗ ನಟ ರಜನೀಕಾಂತ್ ಅವರ ಕ್ಲಾಸ್‌ಮೇಟ್‌ ಆಗಿದ್ದರು ಎಂದು ಟಿ.ಕೆ.ವರ್ಧನ ನೆನಪಿಸಿದರು.

ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ನಡೆಯಿತು. ಅಪರೂಪಕ್ಕೆ ಸಿಕ್ಕ ಎಲ್ಲರೂ ಸ್ನೇಹಿತರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡರು. ಕೆಲವರು ಚೆಸ್‌ ಆಡಿದರು. ಹೀಗೆ ನುಡಿನಮನ ಸಮಾರಂಭವು ಹಳೆಯ ಆಟಗಾರರ ಸಮ್ಮಿಲನದ ಕಾರ್ಯಕ್ರಮದಂತೆಯೂ ಗೋಚರವಾಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕದ ಚೆಸ್‌ ಆಟಗಾರ ಶಶಿಧರ ರೈ ಮತ್ತು ಮಾಜಿ ರಾಜ್ಯ ಚಾಂಪಿಯನ್‌, ಎರಿನ್ ಫೌಂಡೇಷನ್‌ನ ಸಾಯಿಪ್ರಕಾಶ್ ಹಮ್ಮಿಕೊಂಡಿದ್ದರು.

ನುಡಿನಮನ ಸಲ್ಲಿಸಿದ ಝುಲ್ಫಿಕರ್ ಅಹ್ಮದ್
ಸಭೆಯಲ್ಲಿ ಮಾತನಾಡಿದ ಸಾಯಿಪ್ರಕಾಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.