ADVERTISEMENT

ಒಡಿಶಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಶುಭಂಕರ್‌ ವಿರುದ್ಧ ಕಿರಣ್‌ ಮೇಲುಗೈ

ಸೆಮಿಗೆ ಮಾಳವಿಕಾ

ಪಿಟಿಐ
Published 28 ಜನವರಿ 2022, 14:24 IST
Last Updated 28 ಜನವರಿ 2022, 14:24 IST
ಕಿರಣ್ ಜಾರ್ಜ್‌– ಪ್ರಜಾವಾಣಿ ಸಂಗ್ರಹ ಚಿತ್ರ
ಕಿರಣ್ ಜಾರ್ಜ್‌– ಪ್ರಜಾವಾಣಿ ಸಂಗ್ರಹ ಚಿತ್ರ   

ಕಟಕ್‌: ಅಮೋಘ ಆಟವಾಡಿದ ಭಾರತದ ಕಿರಣ್ ಜಾರ್ಜ್ ಅವರು ಮೂರನೇ ಶ್ರೇಯಾಂಕದ ಶುಭಂಕರ್ ಡೇ ಅವರಿಗೆ ಆಘಾತ ನೀಡಿ ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಉತ್ತಮ ಲಯದಲ್ಲಿರುವ ಮಾಳವಿಕಾ ಬಂಸೋಡ್‌ ಕೂಡ ನಾಲ್ಕರ ಘಟ್ಟ ತಲುಪಿದರು.

ಶ್ರೇಯಾಂಕರಹಿತ ಆಟಗಾರ ಕಿರಣ್‌, ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 21–16, 10–21, 21–19ರಿಂದ ಸ್ವದೇಶದ ಆಟಗಾರ ಶುಭಂಕರ್ ಸವಾಲು ಮೀರಿದರು.

21 ವರ್ಷದ ಕಿರಣ್ ಅವರು ನಾಲ್ಕರ ಘಟ್ಟದಲ್ಲಿ, ಅನ್ಸಲ್ ಯಾದವ್‌ ಮತ್ತು ತರುಣ್ ಮನ್ನೆಪಲ್ಲಿ ನಡುವಣ ಕ್ವಾರ್ಟರ್‌ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ADVERTISEMENT

ಮಹಿಳಾ ಸಿಂಗಲ್ಸ್ ವಿಭಾಗದ 58 ನಿಮಿಷಗಳ ಮ್ಯಾರಥಾನ್‌ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಾಳವಿಕಾ21-13, 16-21, 21-17ರಿಂದ ಭಾರತದವರೇ ಆದ ತಾನಿಯಾ ಹೇಮಂತ್‌ ಅವರಿಗೆ ಸೋಲುಣಿಸಿದರು. ಮಾಳವಿಕಾ ಅವರಿಗೆ ಸೆಮಿಫೈನಲ್‌ನಲ್ಲಿ ಉನ್ನತಿ ಹೂಡಾ ಸವಾಲು ಎದುರಾಗಿದೆ. ಇನ್ನೊಂದು ಪಂದ್ಯದಲ್ಲಿ ಉನ್ನತಿ21-10, 21-15ರಿಮದ ಸಮಿಯಾ ಇಮದ್‌ ಫಾರೂಕಿ ಎದುರು ಗೆದ್ದರು.

ಐದನೇ ಶ್ರೇಯಾಂಕದ ಅಸ್ಮಿತಾ ಚಲಿಹಾ21-17, 21-15ರಿಂದ ರುಚಾ ಸಾವಂತ್‌ ಅವರನ್ನು ಪರಾಭವಗೊಳಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಭಾರತದವರೇ ಆದ ಸ್ಮಿಟ್‌ ತೋಶ್ನಿವಾಲ್‌ ಅವರನ್ನು ಎದುರಿಸುವರು. ಎಂಟರಘಟ್ಟದ ಇನ್ನೊಂದು ಪಂದ್ಯದಲ್ಲಿ ಸ್ಮಿಟ್‌8-21, 21-9, 21-14ರಿಂದ ಅಮೆರಿಕದ ಇಶಿಕಾ ಚೌಧರಿ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಜಿದ್ದಾಜಿದ್ದಿನ ಎಂಟರಘಟ್ಟದ ಹೋರಾಟದಲ್ಲಿ ಮಿಥುನ್‌ ಮಂಜುನಾಥ್‌21-13, 14-21, 8-21ರಿಂದ ಪ್ರಿಯಾಂಶು ರಾಜಾವತ್ ಎದುರು ಎಡವಿದರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಎಂ.ಆರ್‌.ಅರ್ಜುನ್–ತ್ರೀಶಾ ಜೋಲಿ, ಬಾಲಕೇಸರಿ ಯಾದವ್‌– ಶ್ವೇತಪರ್ಣ ಪಾಂಡಾ, ಮೌರ್ಯನ್ ಕಥಿವರನ್‌– ಕುಹಾಮ್ ಬಾಲಶ್ರೀ ನಾಲ್ಕರ ಘಟ್ಟಕ್ಕೆ ಕಾಲಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.