ADVERTISEMENT

ಒಡಿಶಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಉನ್ನತಿ ಹೂಡಾ

ಸ್ಮಿತ್ ತೋಶ್ನಿವಾಲ್‌ ಎದುರಾಳಿ

ಪಿಟಿಐ
Published 29 ಜನವರಿ 2022, 12:42 IST
Last Updated 29 ಜನವರಿ 2022, 12:42 IST
ಉನ್ನತಿ ಹೂಡಾ– ಟ್ವಿಟರ್ ಚಿತ್ರ
ಉನ್ನತಿ ಹೂಡಾ– ಟ್ವಿಟರ್ ಚಿತ್ರ   

ಕಟಕ್‌: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಭಾರತದ ಉನ್ನತಿ ಹೂಡಾ, ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ 14 ವರ್ಷದ ಉನ್ನತಿ 24-22, 24-22ರಿಂದ ಭಾರತದವರೇ ಆದ ಮಾಳವಿಕಾ ಬಂಸೋಡ್‌ ಅವರನ್ನು ಸೋಲಿಸಿದರು. ಅಮೋಘ ಲಯದಲ್ಲಿದ್ದ ಮಾಳವಿಕಾ 50 ನಿಮಿಷಗಳ ನಿಮಿಷಗಳ ಪಂದ್ಯದಲ್ಲಿ ಉನ್ನತಿ ಎದುರು ಮಣಿಯಬೇಕಾಯಿತು.

ಇತ್ತೀಚೆಗೆ ಕೊನೆಗೊಂಡ ಇಂಡಿಯಾ ಓಪನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಅವರನ್ನು ಪರಾಭವಗೊಳಿಸಿದ್ದ ಮಾಳವಿಕಾ, ಸೈಯದ್‌ ಮೋದಿ ಅಂತರರಾಷ್ಟ್ರೀಯ ಟೂರ್ನಿಯ ಫೈನಲ್‌ ತಲುಪಿದ ಸಾಧನೆ ಮಾಡಿದ್ದರು. ಅಲ್ಲಿ ಪಿ.ವಿ.ಸಿಂಧು ಅವರಿಗೆ ಸೋತು ರನ್ನರ್ ಅಪ್ ಆಗಿದ್ದರು.

ADVERTISEMENT

ಈ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವ ಜೂನಿಯರ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಸ್ನಿಂ ಮೀರ್‌ ಅವರಿಗೆ ಸೋಲುಣಿಸಿದ್ದರು.ಮಾಳವಿಕಾ ಎದುರಿನ ಗೆಲುವಿನಿಂದಾಗಿ ವಿಶ್ವ ಕ್ರಮಾಂಕದಲ್ಲಿ 418ನೇ ಸ್ಥಾನದಲ್ಲಿರುವ ಉನ್ನತಿ ಅವರ ಆತ್ಮವಿಶ್ವಾಸ ವೃದ್ಧಿಸಿದೆ.

ಮಹಿಳಾ ಸಿಂಗಲ್ಸ್ ಮತ್ತೊಂದು ಹಣಾಹಣಿಯಲ್ಲಿ ಭಾರತದ ಸ್ಮಿತ್ ತೋಶ್ನಿವಾಲ್‌21-19, 10-21, 21-17ರಿಂದ ಭಾರತದವರೇ ಆದ ಅಸ್ಮಿತಾ ಚಲಿಹಾ ಅವರನ್ನು ಸೋಲಿಸಿದರು. ಒಂದು ಗಂಟೆ ಒಂದು ನಿಮಿಷದವರೆಗೆ ಈ ಪಂದ್ಯ ನಡೆಯಿತು.

ಮಿಶ್ರ ಡಬಲ್ಸ್‌ನಲ್ಲಿ ಎಂ.ಆರ್‌. ಅರ್ಜುನ್‌– ತ್ರೀಶಾ ಜೋಲಿ21-9, 21-9ರಿಂದ ಬಾಲಕೇಸರಿ ಯಾದವ್‌- ಶ್ವೇತಪರ್ಣ ಪಂಡಾ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪಿದರು. ಫೈನಲ್‌ನಲ್ಲಿ ಭಾರತದ ಜೋಡಿಗೆ ಶ್ರೀಲಂಕಾದ ಸಚಿನ್ ದಿಯಾಸ್‌ ಮತ್ತು ತಿಳಿನಿ ಹೆಂದಾವ ಸವಾಲು ಎದುರಾಗಿದೆ. ಶ್ರೀಲಂಕಾದ ಜೋಡಿಯು ನಾಲ್ಕರ ಘಟ್ಟದ ಪಂದ್ಯದಲ್ಲಿ21-8, 21-17ರಿಂದ ಭಾರತದ ಮೌರ್ಯನ್‌ ಕದಿರವನ್‌– ಕುಹಾನ್ ಬಾಲಶ್ರೀ ಅವರನ್ನು ಸೋಲಿಸಿದರು.

ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌; ಲಕ್ಷ್ಯ, ಮಾಳವಿಕಾ ಸಾರಥ್ಯ:ಇಂಡಿಯಾ ಓಪನ್ ಚಾಂಪಿಯನ್ ಲಕ್ಷ್ಯ ಸೇನ್ ಮತ್ತು ಸೈಯದ್ ಮೋದಿ ಇಂಟರ್‌ನ್ಯಾಶನಲ್ ಫೈನಲಿಸ್ಟ್ ಮಾಳವಿಕಾ ಬಂಸೋಡ್‌ ಅವರು ಫೆಬ್ರುವರಿ 15ರಿಂದ 20ರವರೆಗೆ ಮಲೇಷ್ಯಾದ ಷಾ ಆಲಂನಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳನ್ನು ಮುನ್ನಡೆಸಲಿದ್ದಾರೆ.

ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಚಾಂಪಿಯನ್‌ಷಿಪ್‌ಗಾಗಿ ಹೊಸ ರೂಪದ ತಂಡವನ್ನು ಪ್ರಕಟಿಸಿದೆ. ಕಳೆದ ತಿಂಗಳು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ನಡೆದ ಎರಡು ಅಖಿಲ ಭಾರತ ರ‍್ಯಾಂಕಿಂಗ್ ಟೂರ್ನಿಗಳಲ್ಲಿ ತೋರಿದ ಸಾಮರ್ಥ್ಯವನ್ನು ತಂಡದ ಆಯ್ಕೆಯಲ್ಲಿ ಪರಿಗಣಿಸಲಾಗಿದೆ.

ತಂಡಗಳು: ಪುರುಷರು: ಸಿಂಗಲ್ಸ್: ಲಕ್ಷ್ಯ ಸೇನ್, ಮಿಥುನ್ ಮಂಜುನಾಥ್‌, ಕಿರಣ್ ಜಾರ್ಜ್‌, ರಘು ಎಂ. ಡಬಲ್ಸ್: ಪಿ.ಎಸ್‌. ರವಿಕೃಷ್ಣ–ಉದಯ್‌ಕುಮಾರ್ ಶಂಕರ್‌ಪ್ರಸಾದ್‌, ಅಮ್ಸಕರುಣನ್‌ ಹರಿಹರನ್‌– ರುಬಾನ್ ಕುಮಾರ್‌, ಡಿಂಕು ಸಿಂಗ್‌ ಕೊಂಥುಜಾಮ್‌– ಮಂಜೀತ್ ಸಿಂಗ್‌ ಕ್ವೈರಪ್‌ಕಮ್‌.

ಮಹಿಳೆಯರು: ಸಿಂಗಲ್ಸ್:ಮಾಳವಿಕಾ ಬಂಸೋಡ್‌, ಆಕರ್ಷಿ ಕಶ್ಯಪ್, ಅಸ್ಮಿತಾ ಚಲಿಹಾ, ತಾರಾ ಶಾ. ಡಬಲ್ಸ್: ಸಿಮ್ರಾನ್ ಸಿಂಘಿ–ಖುಷಿ ಗುಪ್ತಾ, ವಿ ನೀಲಾ –ರೂಬಲ್, ಆರತಿ ಸಾರಾ ಸುನಿಲ್–ರೀಜಾ ಮಹರಿನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.