ADVERTISEMENT

ಒಲಿಂಪಿಕ್ ರಾಣಿಗೆ ಶತಕದ ಸಂಭ್ರಮ

ಜಿಮ್ನಾಸ್ಟಿಕ್ಸ್ ದಂತಕಥೆ; ಮಹಾಯುದ್ಧದ ದುರಂತದಲ್ಲಿ ನಲುಗಿದರೂ ಬದುಕು ಮುನ್ನಡೆಸಿದ ಛಲಗಾರ್ತಿ ಕೆಲೇತಿ

ಏಜೆನ್ಸೀಸ್
Published 9 ಜನವರಿ 2021, 14:27 IST
Last Updated 9 ಜನವರಿ 2021, 14:27 IST
ಆ್ಯಗ್ನೆಸ್ ಕೆಲೇತಿ –ಎಎಫ್‌ಪಿ ಚಿತ್ರ
ಆ್ಯಗ್ನೆಸ್ ಕೆಲೇತಿ –ಎಎಫ್‌ಪಿ ಚಿತ್ರ   

ಬುಡಾಪೆಸ್ಟ್: ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳ ಪೈಕಿ ಬದುಕಿರುವವರಲ್ಲಿ ಅತಿ ಹಿರಿಯರಾದ ಆ್ಯಗ್ನೆಸ್ ಕೆಲೇತಿ ಶನಿವಾರ ಶತಕದ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಯುದ್ಧದ ಸಂದರ್ಭದಲ್ಲಿ ಆಕ್ರಮಣದಿಂದ ಪಾರಾಗಿ ಸವಾಲಿನ ಜೀವನ ನಡೆಸಿದ ಕೆಲೇತಿ ನೂರರ ವಸಂತದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು; ಅಭಿಮಾನಿಗಳು ಅವರನ್ನು ಅಭಿನಂದಿಸಿ ಖುಷಿಪಟ್ಟರು.

ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್‌ನಲ್ಲಿ ಐದು ಚಿನ್ನ ಸೇರಿದಂತೆ 10 ಪದಕಗಳನ್ನು ಗಳಿಸಿರುವ ಕೆಲೇತಿ ಅವರ ಬದುಕಿನ ಬ‌ಗ್ಗೆ ರಚಿಸಲಾದ ‘ದಿ ಕ್ವೀನ್ ಆಫ್ ಜಿಮ್ನಾಸ್ಟಿಕ್ಸ್‌: 100 ಇಯರ್ಸ್ ಆಫ್ ಆ್ಯಗ್ನೆಸ್ ಕೆಲೇತಿ’ ಎಂಬ ಪುಸ್ತಕವನ್ನು ಶನಿವಾರ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ‘ಕಳೆದು ಹೋದ 100 ವರ್ಷಗಳು 60 ವರ್ಷಗಳಂತೆ ಭಾಸವಾಗುತ್ತಿವೆ’ ಎಂದು ಕೆಲೇತಿ ಅಭಿಪ್ರಾಯಪಟ್ಟರು.

1921ರಲ್ಲಿ ಜನಿಸಿದ ಕೆಲೇತಿ ಅವರು ಯಹೂದಿ ಸಮುದಾಯಕ್ಕೆ ಸೇರಿದ ಕಾರಣ ವೃತ್ತಿಜೀವನದಲ್ಲಿ ಅನೇಕ ತೊಡಕುಗಳನ್ನು ಕಂಡರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರ ತಂದೆ ಮತ್ತು ಕೆಲವು ಸಂಬಂಧಿಕರನ್ನು ಕೊಲೆ ಮಾಡಲಾಯಿತು. ತಾಯಿ ಮತ್ತು ಸಹೋದರಿ ಬದುಕುಳಿದರು. ಆಕ್ರಮಣದಿಂದ ತಪ್ಪಿಸಿಕೊಂಡ ಕೆಲೇತಿ ಅವರು ಹಂಗರಿಯ ಗಡಿಭಾಗದಲ್ಲಿ ಮನೆಕೆಲಸದಾಕೆಯಾಗಿ ಜೀವನ ಸಾಗಿಸಿದರು. ಯುದ್ಧದ ನಂತರ ಕ್ರೀಡಾಜೀವನ ಮುಂದುವರಿಸಿದ ಅವರು 1952ರಲ್ಲಿ ಹೆಲ್ಸಿಂಕಿಯಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದರು. ಆಗ ಅವರ ವಯಸ್ಸು 31 ಆಗಿತ್ತು. ಆ ಕೂಟದ ಫ್ಲೋರ್ ಎಕ್ಸೈಸ್‌ನಲ್ಲಿ ಚಿನ್ನ ಗೆದ್ದ ಕೆಲೇತಿ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನೂ ಗಳಿಸಿದರು. 1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ಮಾಡಿ ಯಹೂದಿಯರ ಪೈಕಿ ಅತ್ಯಂತ ಶ್ರೇಷ್ಠ ಕ್ರೀಡಾಪಟು ಎಂದೆನಿಸಿಕೊಂಡರು.

ADVERTISEMENT

‘ಎಲ್ಲದಕ್ಕೂ ಆರೋಗ್ಯ ಮುಖ್ಯ. ಅದಿಲ್ಲದೆ ಜೀವನದಲ್ಲಿ ಏನನ್ನು ಸಾಧಿಸಲೂ ಆಗದು. ನನಗೆ ಆರೋಗ್ಯ ಇದ್ದ ಕಾರಣ ಯಶಸ್ಸು ಕಂಡೆ. ಇಂದಿಗೂ ನಾನು ಜೀವನವನ್ನು ಪ್ರೀತಿಸುತ್ತೇನೆ’ ಎಂದು ಕೆಲೇತಿ ಹೇಳಿದರು. 35ರ ಹರಯದಲ್ಲಿ ಚಿನ್ನ ಗೆದ್ದು ಜಿಮ್ನಾಸ್ಟಿಕ್ಸ್‌ನಲ್ಲಿ ಪದಕ ಗಳಿಸಿದ ಅತಿ ಹಿರಿಯ ಕ್ರೀಡಾಪಟು ಎಂದೆನಿಸಿಕೊಂಡ ಅವರು ಕೆಲಕಾಲ ಆಸ್ಟ್ರೇಲಿಯಾದಲ್ಲಿ ಆಸರೆ ಪಡೆದ ನಂತರ ಇಸ್ಲೇಲಿಗೆ ಪ್ರಯಾಣ ಬೆಳೆಸಿದರು. 1990ರ ವರೆಗೆ ಇಸ್ರೇಲ್ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. 2015ರಲ್ಲಿ ಮೊದಲ ಬಾರಿ ಮೊದಲ ಬಾರಿ ತಾಯ್ನಾಡಿಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.