ADVERTISEMENT

ಒಲಿಂಪಿಯನ್ ಬ್ಯಾಡ್ಮಿಂಟನ್ ತಾರೆ ಅಯಾಕ ನಿವೃತ್ತಿ

ಏಜೆನ್ಸೀಸ್
Published 20 ಆಗಸ್ಟ್ 2020, 15:12 IST
Last Updated 20 ಆಗಸ್ಟ್ 2020, 15:12 IST
ಉಬರ್ ಕಪ್ ಟೂರ್ನಿಯಲ್ಲಿ ಗೆದ್ದ ಪ್ರಶಸ್ತಿ ಎತ್ತಿಹಿಡಿದು ತಂಡದೊಂದಿಗೆ ಸಂಭ್ರಮಿಸಿ ಅಯಾಕ ತಕಹಾಶಿ –ಎಎಫ್‌ಪಿ ಚಿತ್ರ
ಉಬರ್ ಕಪ್ ಟೂರ್ನಿಯಲ್ಲಿ ಗೆದ್ದ ಪ್ರಶಸ್ತಿ ಎತ್ತಿಹಿಡಿದು ತಂಡದೊಂದಿಗೆ ಸಂಭ್ರಮಿಸಿ ಅಯಾಕ ತಕಹಾಶಿ –ಎಎಫ್‌ಪಿ ಚಿತ್ರ   

ಟೋಕಿಯೊ: ಬ್ಯಾಡ್ಮಿಂಟನ್‌ನಲ್ಲಿ ಜಪಾನ್‌ನಗೆ ಮೊದಲ ಒಲಿಂಪಿಕ್ಸ್‌ ಚಿನ್ನ ಗಳಿಸಿಕೊಟ್ಟ ಅಯಾಕ ತಕಹಾಶಿ ಗುರುವಾರ ನಿವೃತ್ತಿ ಘೋಷಿಸಿದರು. ಅಂಗಣದಲ್ಲಿ ಕಾದಾಡಿ ಗೆಲ್ಲಲು ಸಾಕಾಗುವಷ್ಟು ಶಕ್ತಿ ದೇಹದಲ್ಲಿ ಉಳಿದಿಲ್ಲ, ಆದ್ದರಿಂದ ವೃತ್ತಿಪರ ಬ್ಯಾಡ್ಮಿಂಟನ್‌ಗೆ ವಿದಾಯ ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ತಕಹಾಶಿ ಅವರು ಮಿಸಾಕಿ ಮಟ್ಸುಟೊಮೆ ಅವರೊಂದಿಗೆ ಸೇರಿ 2016ರ ರಿಯೊ ಒಲಿಂಪಿಕ್ಸ್‌ನ ಮಹಿಳೆಯರ ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಕ್ರಿಸ್ಟಿನಾ ಪೆಡೆರ್ಸನ್ ಮತ್ತು ಕಮಿಲಾ ರಿಟ್ಟರ್ ಜೂಲ್ ಅವರನ್ನು ಈ ಜೋಡಿ ಮಣಿಸಿತ್ತು. ನಿರ್ಣಾಯಕ ಗೇಮ್‌ನಲ್ಲಿ 16–19ರ ಹಿನ್ನಡೆ ಗಳಿಸಿದ್ದ ಸಂದರ್ಭದಲ್ಲಿ ಸತತ ಐದು ಪಾಯಿಂಟ್‌ಗಳನ್ನು ಕಲೆ ಹಾಕಿ ಅವರು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಈ ವರ್ಷ ನಡೆಯಬೇಕಾಗಿದ್ದ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಕೋವಿಡ್–19 ಹಾವಳಿಯಿಂದಾಗಿ ಮುಂದೂಡಿರುವುದರಿಂದ ತವರಿನಲ್ಲಿ ಕಣಕ್ಕೆ ಇಳಿಯುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ.

‘ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಆಗುತ್ತಿಲ್ಲ. ಮಟ್ಸುಟೊಮೊ ಅವರೊಂದಿಗೆ ಕಠಿಣ ಅಭ್ಯಾಸ ಮಾಡಿದ್ದೇನೆ. ಆದರೂ 2019ರ ಪ್ರದರ್ಶನ ನನಗೆ ತೃಪ್ತಿ ತಂದಿಲ್ಲ. ಟೂರ್ನಿಗಳನ್ನು ಮತ್ತು ಒಲಿಂಪಿಕ್ಸ್ ಕೂಟವನ್ನು ಮುಂದೂಡಿದ್ದರಿಂದ ನಿರೀಕ್ಷಿತ ಸಂಖ್ಯೆಯಲ್ಲಿ ಪಂದ್ಯಗಳನ್ನು ಅಡಲು ಸಾಧ್ಯವಾಗಲಿಲ್ಲ’ ಎಂದು ಅವರು ಆನ್‌ಲೈನ್ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ADVERTISEMENT

ರಿಯೊದಲ್ಲಿ ತೋರಿದ ಅಪ್ರತಿಮ ಸಾಧನೆಯ ನಂತರ ತಕಹಾಶಿ ಮತ್ತು ಮಟ್ಸುಟೊಮೊ ಅವರ ಹೆಸರನ್ನು ಜೊತೆಗೂಡಿಸಿ ತಕಮಟ್ಸು ಎಂದು ಹೇಳುವುದು ಜಪಾನ್‌ನಲ್ಲಿ ರೂಢಿಯಾಗಿತ್ತು. 1992ರಲ್ಲಿ ಒಲಿಂಪಿಕ್‌ ಕೂಟದಲ್ಲಿ ಬ್ಯಾಡ್ಮಿಂಟನ್ ಸೇರಿಸಿದ ನಂತರ ಡಬಲ್ಸ್‌ನಲ್ಲಿ ಚೀನಾ ಪಾರಮ್ಯ ಮೆರೆದಿತ್ತು. ಈ ದಾಖಲೆಯನ್ನು ತಕಮಟ್ಸು ಜೋಡಿ ಮುರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.