ಗೆಲುವು–ಸೋಲಿನ ಸಿಹಿ–ಕಹಿ ನಡುವೆ ವಿವಾದಗಳೂ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿವೆ. ದ್ವಿಪಕ್ಷೀಯ ಸಂಘರ್ಷ, ಜನಾಂಗೀಯ ನಿಂದನೆ, ನಿಯಮಗಳ ಅಸ್ತ್ರ ಬಳಕೆ, ಅಧಿಕಾರಶಾಹಿಯ ದರ್ಪ, ಅನರ್ಹತೆಯ ಬೇಸರ, ಬಹಿಷ್ಕಾರದ ಮೂಲಕ ಸೇಡು, ತೀರ್ಪಿನ ಬಗ್ಗೆ ಅಸಮಾಧಾನ ಮುಂತಾದವು ವಿವಾದಗಳಿಗೆ ಎಡೆಮಾಡಿಕೊಟ್ಟಿವೆ.
1908ರ ಲಂಡನ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ಅಮೆರಿಕದ ಜಾನ್ ಕಾರ್ಪೆಂಟರ್ ಬ್ರಿಟನ್‌ನ ವಿಂಧಮ್ ಹಾಲ್ಸ್‌ವೆಲಿ ಅವರಿಗೆ ಅಡ್ಡಿ ಉಂಟುಮಾಡಿದ್ದರು. ಕಾರ್ಪೆಂಟರ್ ಅವರನ್ನು ಅನರ್ಹಗೊಳಿಸಿ ಹಾಲ್ಸ್‌ವೆಲಿ ಮತ್ತು ಇತರ ಇಬ್ಬರು ಫೈನಲಿಸ್ಟ್‌ಗಳ ಮರು ಓಟಕ್ಕೆ ನಿರ್ಧರಿಸಲಾಯಿತು. ಅಮೆರಿಕದ ಇಬ್ಬರು ಸ್ಪರ್ಧಿಸದ ಕಾರಣ ಹಾಲ್ಸ್‌ವೆಲಿಗೆ ಪದಕ ನೀಡಲಾಯಿತು. ಇದು ಒಲಿಂಪಿಕ್ಸ್ ಓಟದ ಏಕೈಕ ವಾಕ್ ಓವರ್ ಸ್ಪರ್ಧೆಯಾಯಿತು.
1912ರ ಸ್ಟಾಕ್‌ಹೋಂ ಒಲಿಂಪಿಕ್ಸ್‌ನ ಡೆಕಾಥ್ಲಾನ್ ಮತ್ತು ಪೆಂಟಾಥ್ಲಾನ್‌ನಲ್ಲಿ ಅಮೆರಿಕದ ಜಿಮ್ ಥೋರ್ಪ್ ಮತ್ತು 1932ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಫಿನ್ಲೆಂಡ್‌ನ ಪಾವೊ ನುರ್ಮಿ ಅವರನ್ನು ‘ವೃತ್ತಿಪರತೆ’ಯ ಆರೋಪ ಕಾಡಿತು. ಥೋರ್ಪ್ ಚಿನ್ನ ಗೆದ್ದಿದ್ದರೂ ಅದನ್ನು ತಡೆಹಿಡಿಯಲಾಯಿತು. ಪದಕವನ್ನು ಮರಣೋತ್ತರವಾಗಿ 1983ರಲ್ಲಿ ಅವರ ಮಕ್ಕಳಿಗೆ ನೀಡಲಾಯಿತು. ಸ್ವೀಡನ್ ಅಧಿಕಾರಿಗಳ ಕುತಂತ್ರ ಪಾವೊ ನುರ್ಮಿ ಅನರ್ಹತೆಗೆ ಕಾರಣ ಎಂಬ ಆರೋಪ ಕೇಳಿಬಂತು.
ಬದಲಿ ‘ಒಲಿಂಪಿಯಾಡ್’ನ ಬೆದರಿಕೆ, ಐರಿಷ್ ಒಲಿಂಪಿಕ್ ಕೌನ್ಸಿಲ್‌ನಿಂದ ಬಹಿಷ್ಕಾರ, ಅಮೆರಿಕ ಅಥ್ಲೀಟ್ ಜೆಸ್ಸಿ ಒವೆನ್ಸ್ ಕೈಕುಲುಕಲು ಹಿಟ್ಲರ್ ನಿರಾಕರಣೆ, ತಪ್ಪೆಸಗಿದರೂ ಜರ್ಮನ್ ಸೈಕ್ಲಿಸ್ಟ್ ಟೋನಿ ಮಾರ್ಕೆನ್ಸ್‌ಗೆ ದಂಡವನ್ನಷ್ಟೇ ಹೇರಿದ್ದು, ಮೋಸ ಆರೋಪಿಸಿ ಪೆರು ಮತ್ತು ಕೊಲಂಬಿಯಾ ಫುಟ್‌ಬಾಲ್ ಆಟಗಾರರು ವಾಪಸಾದದ್ದು ಇತ್ಯಾದಿಗಳು 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದವು.
1956ರ ಮೆಲ್ಬರ್ನ್ ಒಲಿಂಪಿಕ್ಸ್‌ಗೆ ಎಂಟು ರಾಷ್ಟ್ರಗಳು ಬಹಿಷ್ಕಾರ ಹಾಕಿದರೆ ವಾಟರ್‌ಪೋಲೊದಲ್ಲಿ ಸೋವಿಯತ್ ಯೂನಿಯನ್ ಮತ್ತು ಹಂಗರಿ ಆಟಗಾರರು ಹೊಡೆದಾಡಿಕೊಂಡು ರಕ್ತ ಸುರಿಸಿದರು.
1992 ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಉತ್ತೇಜಕ ಮದ್ದು, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ವಿಜರ್ಲೆಂಡ್ ಫುಟ್‌ಬಾಲ್ ಆಟಗಾರ ಮೈಕೆಲ್ ಮಾರ್ಗನಿಲಾ ಮಾಡಿದ ಜನಾಂಗೀಯ ನಿಂದನೆ ಸದ್ದು ಮಾಡತೊಡಗಿತು. ಇಸ್ರೇಲ್ ಸ್ಪರ್ಧಿ ವಿರುದ್ಧ ಸೆಣಸಲು ಹಿಂದೇಟು ಹಾಕಿದ ಅಲ್ಜೀರಿಯಾದ ಜೂಡೊ ಪಟು ಫೇತಿ ನೌರಿನ್ ಅವರನ್ನು 2020ರ ಟೋಕಿಯೊ ಒಲಿಂಪಿಕ್ಸ್‌ನಿಂದ ವಾಪಸ್ ಕಳುಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.