
ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯ ನಂತರ ಭಾರತ– ಪಾಕಿಸ್ತಾನ ನಡುವೆ ತ್ವೇಷದ ವಾತಾವರಣ ತಲೆದೋರಿದೆ. ಹೀಗಾಗಿ ಮುಂದಿನ ತಿಂಗಳ ಹೀರೊ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ಆಡುವುದು ಅನುಮಾನವಾಗಿದೆ.
ಆಗಸ್ಟ್ 27 ರಿಂದ ಸೆಪ್ಟೆಂಬರ್ 7ರವರೆಗೆ ಬಿಹಾರದ ರಾಜಗೀರ್‌ನಲ್ಲಿ ಈ ಟೂರ್ನಿ ನಿಗದಿಯಾಗಿದೆ. ಪಾಕ್ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಭಾರತ ಹಾಕಿ ಫೆಡರೇಷನ್ ಸರ್ಕಾರದ ಸಲಹೆಗೆ ಕಾಯುತ್ತಿದೆ. 12ನೇ ಆವೃತ್ತಿಯ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡದ ಜೊತೆ ಪಾಕಿಸ್ತಾನ, ಜಪಾನ್, ದಕ್ಷಿಣ ಕೊರಿಯಾ, ಚೀನಾ, ಮಲೇಷ್ಯಾ, ಒಮಾನ್ ಮತ್ತು ಚೀನಾ ತೈಪೆ ಭಾಗವಹಿಸಬೇಕಾಗಿದೆ.
ಈ ಟೂರ್ನಿಯು ಮುಂದಿನ ವರ್ಷ ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಜಂಟಿಯಾಗಿ ನಡೆಯಲಿರುವ ವಿಶ್ವ ಕಪ್‌ಗೆ ಅರ್ಹತೆ ಪಡೆಯುವ ತಂಡವನ್ನು ನಿರ್ಧರಿಸಲಿದೆ.
‘ಈಗಲೇ ಏನೂ ಹೇಳಲಾಗದು. ಆದರೆ ಈ ವಿಷಯಕ್ಕೆ ಸಂಬಂಧಿಸಿ ಸರ್ಕಾರದ ನಿರ್ದೇಶನವನ್ನು ನಾವು ಅನುಸರಿಸುತ್ತೇವೆ’ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ ಸಿಂಗ್ ಪಿಟಿಐಗೆ ತಿಳಿಸಿದರು.
‘ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಬರ್ಬರ ದಾಳಿ, ನಂತರ ಸಿಂಧೂರ್ ಕಾರ್ಯಾಚರಣೆಯ ಬಳಿಕ ನಾವು ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಟೂರ್ನಿಗೆ ಇನ್ನೂ ಮೂರು ತಿಂಗಳ ಸಮಯ ಇದೆ’ ಎಂದರು.
ಒಂದು ವೇಳೆ ಪಾಕಿಸ್ತಾನಕ್ಕೆ ಭಾರತ ಪ್ರಯಾಣಕ್ಕೆ ಅನುಮತಿ ದೊರಕದಿದ್ದಲ್ಲಿ ಟೂರ್ನಿ ಏಳು ತಂಡಗಳಿಗೆ ಸೀಮಿತಗೊಳ್ಳಲಿದೆ. ಇಲ್ಲವೇ ತೆರವಾದ ಸ್ಥಾನಕ್ಕೆ ಇನ್ನೊಂದು ತಂಡವನ್ನು ಆಡಿಸಲೂ ಅವಕಾಶವಿದೆ. ಇದು ಏಷ್ಯನ್ ಹಾಕಿ ಫೆಡರೇಷನ್ ವಿವೇಚನೆಯನ್ನು ಅವಲಂಬಿಸಿದೆ.
2016ರ ಜೂನಿಯರ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆದ ವೇಳೆ ಪಾಕಿಸ್ತಾನ ಆಡಿರಲಿಲ್ಲ. ಆ ಟೂರ್ನಿಗೆ ಕೆಲವೇ ತಿಂಗಳ ಮೊದಲು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಆ ಟೂರ್ನಿಯಲ್ಲಿ ಪಾಕಿಸ್ತಾನ ಬದಲು ಮಲೇಷ್ಯಾ ಆಡಿತ್ತು. ಆದರೆ ನಂತರ ಭಾರತದಲ್ಲಿ ನಡೆದ ಟೂರ್ನಿಗಳಲ್ಲಿ ಪಾಕ್ ತಂಡ ಭಾಗವಹಿಸಿತ್ತು.
ಉಭಯ ದೇಶಗಳ ಬಾಂಧವ್ಯ ಹದಗೆಟ್ಟಿರುವ ಕಾರಣ, ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ಚೆನ್ನೈ ಮತ್ತು ಮಧುರೈಯಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲೂ ಪಾಕಿಸ್ತಾನದ ಭಾಗವಹಿಸುವಿಕೆ ಮೇಲೆ ಪ್ರಶ್ನೆ ಅನುಮಾನಗಳನ್ನು ಮೂಡಿಸಿದೆ.
ಹೆಚ್ಚಿನ ಮಹತ್ವ: ಏಷ್ಯಾಕಪ್ ಟೂರ್ನಿಯು, ವಿಶ್ವಕಪ್‌ಗೆ ಕ್ವಾಲಿಫೈಯರ್ ಆಗಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ. ಟೂರ್ನಿಯ ವಿಜೇತ ತಂಡ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ. ವಿಶ್ವಕಪ್ 2026ರ ಆಗಸ್ಟ್ 14 ರಿಂದ 30ರವರೆಗೆ ಬೆಲ್ಜಿಯಂನ ವಾವ್ ಮತ್ತು ನೆದರ್ಲೆಂಡ್ಸ್‌ನ ಆಮ್‌ಸ್ಟಲ್ವೀನ್‌ನಲ್ಲಿ ನಡೆಯಲಿದೆ.
ಐದು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ, ಟೂರ್ನಿಯ ಹಾಲಿ ಚಾಂಪಿಯನ್ ಸಹ ಆಗಿದೆ. ಭಾರತ ಮತ್ತು ಪಾಕಿಸ್ತಾನ ತಲಾ ಮೂರು ಸಲ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.