ADVERTISEMENT

ಭಾರತದ ಕಬಡ್ಡಿ ತಂಡದ ಪರವಾಗಿ ಪಂದ್ಯವಾಡಿದ ಪಾಕಿಸ್ತಾನಿ ಆಟಗಾರನ ಮೇಲೆ ನಿರ್ಬಂಧ

ಪಿಟಿಐ
Published 28 ಡಿಸೆಂಬರ್ 2025, 9:55 IST
Last Updated 28 ಡಿಸೆಂಬರ್ 2025, 9:55 IST
   

ಕರಾಚಿ: ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರು ಬಹ್ರೇನ್‌ನಲ್ಲಿ ಜರುಗಿದ ಖಾಸಗಿ ಟೂರ್ನಿಯೊಂದರಲ್ಲಿ ಭಾರತದ ತಂಡದ ಪರ ಆಟವಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಪಾಕಿಸ್ತಾನ ಕಬಡ್ಡಿ ತಂಡದ ಪ್ರಮುಖ ಆಟಗಾರನಾಗಿರುವ ಉಬೈದುಲ್ಲಾ ರಜಪೂತ್, ಇತ್ತೀಚೆಗೆ ಬಹ್ರೇನ್‌ನಲ್ಲಿ ನಡೆದ ಜಿಸಿಸಿ ಕಪ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಖಾಸಗಿ ಟೂರ್ನಿಯಲ್ಲಿ ಅವರು ಭಾರತ ಮೂಲದ ತಂಡದಲ್ಲಿ ಆಟವಾಡಿದ್ದರು. ಈ ವೇಳೆ ಅವರು ಭಾರತ ಮೂಲದ ತಂಡದ ಜರ್ಸಿ ಧರಿಸಿ, ರಾಷ್ಟ್ರ ಧ್ವಜವನ್ನು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಬಡ್ಡಿ ಫೆಡರೇಶನ್ ಅನುಮತಿ ಇಲ್ಲದೇ ವಿದೇಶದಲ್ಲಿನ ಟೂರ್ನಿಯಲ್ಲಿ ಭಾಗವಹಿಸಿದ ಉಬೈದುಲ್ಲಾ ರಜಪೂತ್ ಅವರ ಮೇಲೆ ಅನಿರ್ದಿಷ್ಟಾವಧಿ ನಿರ್ಬಂಧ ವಿಧಿಸಲಾಗಿದೆ ಎಂದು ಪಾಕಿಸ್ತಾನ ಕಬಡ್ಡಿ ಫೆಡರೇಶನ್(ಪಿಕೆಎಫ್‌) ಶನಿವಾರ ತಿಳಿಸಿದೆ.

ADVERTISEMENT

ಉಬೈದುಲ್ಲಾ ರಜಪೂತ್ ಅವರು ವಿದೇಶದಲ್ಲಿ ನಡೆದ ಟೂರ್ನಿಯಲ್ಲಿ ಭಾಗವಹಿಸಲು ‘ಎನ್‌ಒಸಿ’ಯನ್ನು ಕೂಡ ಪಡೆದುಕೊಂಡಿಲ್ಲ. ಅದೂ ಅಲ್ಲದೇ ಭಾರತ ಮೂಲದ ತಂಡದ ಪರವಾಗಿ ಭಾಗವಹಿಸಿದ್ದಾರೆ. ಆ ತಂಡದ ಜರ್ಸಿ ಧರಿಸಿದ್ದಾರೆ. ಪಂದ್ಯ ಗೆದ್ದ ಬಳಿಕ ಭಾರತದ ಧ್ವಜವನ್ನು ಹಿಡಿದುಕೊಂಡಿರುವುದನ್ನು ಕಬಡ್ಡಿ ಫೆಡರೇಶನ್ ಗಂಭೀರವಾಗಿ ಪರಿಗಣಿಸಿದೆ ಎಂದು ಪಿಕೆಎಫ್‌ ಕಾರ್ಯದರ್ಶಿ ರಾಣಾ ಸರ್ವಾರ್ ತಿಳಿಸಿದ್ದಾರೆ.

ಜಿಸಿಸಿ ಕಪ್‌ ಟೂರ್ನಿಯಲ್ಲಿ ಅನುಮತಿಯಿಲ್ಲದೆ ಭಾಗವಹಿಸಿದ ಇತರ ಆಟಗಾರರ ಮೇಲೆ ಕೂಡ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಬಹ್ರೇನ್‌ನಲ್ಲಿ ಖಾಸಗಿ ತಂಡದ ಪರವಾಗಿ ಆಡುವಂತೆ ಆಹ್ವಾನ ನೀಡಲಾಗಿತ್ತು. ಆದರೆ, ನಾನು ಭಾರತ ಮೂಲದ ತಂಡದಲ್ಲಿ ಆಡುತ್ತಿರುವ ಕುರಿತು ನನಗೆ ಮಾಹಿತಿ ಇರಲಿಲ್ಲ. ನಂತರವೂ ಭಾರತ ಮತ್ತು ಪಾಕಿಸ್ತಾನದ ಹೆಸರನ್ನು ಉಲ್ಲೇಖ ಮಾಡದಂತೆ ನಾನು ಸಂಘಟಕರಿಗೆ ಮನವಿ ಮಾಡಿದ್ದೆ. ಈ ಹಿಂದೆಯೂ ಖಾಸಗಿ ಟೂರ್ನಿಗಳಲ್ಲಿ ಎರಡೂ ದೇಶಗಳ ಆಟಗಾರರು ಒಟ್ಟಾಗಿ ಆಡಿದ್ದರು’ ಎಂದು ಉಬೈದುಲ್ಲಾ ರಜಪೂತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.