ADVERTISEMENT

National Sports Awards: ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರದಾನ

ಪ್ಯಾರಾ ಅಥ್ಲೀಟ್‌ಗಳಿಗೆ ಭಾರಿ ಚಪ್ಪಾಳೆ

ಪಿಟಿಐ
Published 17 ಜನವರಿ 2025, 13:34 IST
Last Updated 17 ಜನವರಿ 2025, 13:34 IST
   

ನವದೆಹಲಿ: ಮನು ಭಾಕರ್ ಮತ್ತು ಡಿ.ಗುಕೇಶ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಕರ್ಷಣೆಯಾಗಿದ್ದರು. ಆದರೆ ಹೆಚ್ಚಿನ ಕಿವಿಗಡಚಿಕ್ಕುವ ಕರತಾಡನಗಳು ಕೇಳಿಬಂದಿದ್ದು ಸುಮಾರು ಅರ್ಧದಷ್ಟು ಸಂಖ್ಯೆಯಲ್ಲಿ ಪ್ಯಾರಾ ಅಥ್ಲೀಟುಗಳಿಗೆ.

ನಾಲ್ಕು ಮಂದಿ ಸಾಧಕರು ಪ್ರತಿಷ್ಠಿತ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಗೌರವಕ್ಕೆ ಪಾತ್ರರಾದರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಪಡೆದ ಮನು ಭಾಕರ್‌, ವಿಶ್ವ ಚೆಸ್ ಚಾಂಪಿಯನ್, 18 ವರ್ಷ ವಯಸ್ಸಿನ ಡಿ.ಗುಕೇಶ್‌, ರಾಷ್ಟ್ರೀಯ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ಸ್‌ ಹೈಜಂಪ್ ಸ್ವರ್ಣ ವಿಜೇತ ಪ್ರವೀಣ್ ಕುಮಾರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು.

22 ವರ್ಷ ವಯಸ್ಸಿನ ಭಾಕರ್‌, ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎನಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ 10 ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ ಮತ್ತು 10 ಮೀ. ಏರ್‌ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

ADVERTISEMENT

‘ದೃಢಚಿತ್ತ ಮತ್ತು ಸ್ಥಿರ ಪ್ರದರ್ಶನದಿಂದ ಸ್ಪರ್ಧೆ ಗೆಲ್ಲಬಹುದು ಎಂಬುದು ನನ್ನ ವಿಶ್ವಾಸ. ಖೇಲ್‌ ರತ್ನ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಆಭಾರಿ’ ಎಂದು ಭಾಕರ್‌ ಪಿಟಿೈ ವಿಡಿಯೋಸ್‌ಗೆ ತಿಳಿಸಿದರು.

ಟೋಕಿಯೊ ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕರಾಗಿದ್ದರು. ಪ್ಯಾರಾ ಅಥ್ಲೀಟ್‌ ಪ್ರವೀಣ್, ಟೋಕಿಯೊದಲ್ಲಿ ಬೆಳ್ಳಿ ಗೆದ್ದರೆ, ನಾಲ್ಕು ವರ್ಷಗಳ ನಂತರ ಚಿನ್ನ ಗೆದ್ದಿದ್ದರು. ಅವರ ಎಡಗಾಲಿನ ಉದ್ದ ಕಡಿಮೆಯಿದೆ.

ಗುಕೇಶ್ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ.

ಅರ್ಜುನ ಪ್ರಶಸ್ತಿ: 32 ಮಂದಿ ಅಥ್ಲೀಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ 17 ಮಂದಿ ಪ್ಯಾರಾ ಅಥ್ಲೀಟುಗಳು ಇದ್ದಿದ್ದು ವಿಶೇಷ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಅಥ್ಲೀಟುಗಳ ಜೊತೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಅಥ್ಲೀಟುಗಳಿಗೂ ಈ ಬಾರಿ ಗೌರವಿಸಲಾಗಿದೆ.

‌ಪ್ಯಾರಿಸ್‌ನಲ್ಲಿ ಪದಕ ಗೆದ್ದ ಅಮನ್‌ ಸೆಹ್ರಾವತ್ (ಕುಸ್ತಿ), ಶೂಟರ್‌ಗಳಾದ ಸ್ವಪ್ನಿಲ್ ಕುಸಳೆ ಮತ್ತು ಸರಬ್ಜೋತ್ ಸಿಂಗ್ (ಭಾಕರ್ ಜೊತೆ ಶೂಟಿಂಗ್ ಮಿಶ್ರ ವಿಭಾಗದಲ್ಲಿ ಪದಕ), ಕಂಚು ಗೆದ್ದ ಹಾಕಿ ತಂಡದಲ್ಲಿದ್ದ ಜರ್ಮನ್‌ಪ್ರೀತ್, ಸುಖಜೀತ್‌, ಸಂಜಯ್ ಮತ್ತು ಅಭಿಷೇಕ್ ಇವರಲ್ಲಿ ಒಳಗೊಂಡಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಈ ಬಾರಿ 29 ಪದಕಗಳನ್ನು ಗೆದ್ದು ಅಮೋಘ ಸಾಧನೆ ದಾಖಲಿಸಿತ್ತು.

ರಾಷ್ಟ್ರಪತಿ ಮುರ್ಮು ಅವರು ಶಿಷ್ಟಾಚಾರ ಬದಿಗೊತ್ತಿ ವೀಲ್‌ ಚೇರ್ ಅಥ್ಲೀಟುಗಳ ಬಳಿ ಹೋಗಿ ಅವರನ್ನು ಸ್ವಾಗತಿಸಿದರು.

ಹಾಜರಿದ್ದ ಗಣ್ಯರಲ್ಲಿ ಕ್ರೀಡಾ ಸಚಿವ  ಮನ್ಸುಖ್ ಮಾಂಡವೀಯ, ಸಚಿವ ಕಿರಣ್ ರಿಜಿಜು, ಕ್ರೀಡಾ ಇಲಾಖೆ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಕೂಡ ಒಳಗೊಂಡಿದ್ದರು. ಖೇಲ್‌ ರತ್ನ ಪ್ರಶಸ್ತಿಯು ₹25 ಲಕ್ಷ ನಗದು, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯು ತಲಾ ₹15 ಲಕ್ಷ ನಗದು ಬಹುಮಾನ ಹೊಂದಿದೆ.

ಪೇಟ್ಕರ್‌ಗೆ ಹೆಚ್ಚಿನ ಮೆಚ್ಚುಗೆ

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ಮನಮಿಡಿಯವ ಸನ್ನಿವೇಶ ಎದುರಾಗಿದ್ದು ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ) ಪಡೆದ ಮುರಳಿಕಾಂತ ಪೇಟ್ಕರ್ ಅವರು ಪ್ರಶಸ್ತಿ ಸ್ವೀಕರಿಸುವಾಗ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಅರ್ಧದಷ್ಟು ಮುಂದೆ ಬಂದರು ಉರುಗೋಲು ಆಸರೆಯಿಂದ ಬಂದ ಪೇಟ್ಕರ್ ಅವರನ್ನು ಬರಮಾಡಿಕೊಂಡರು.

80 ವರ್ಷ ವಯಸ್ಸಿನ ಯುದ್ಧವೀರರಾದ ಪೇಟ್ಕರ್‌, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ. 1972ರಲ್ಲಿ ಹಿಡೆಲ್‌ಬರ್ಗ್‌ ಕೂಟದ 50 ಮೀ. ಫ್ರೀಸ್ಟೈಲ್‌ ಈಜಿನಲ್ಲಿ ಅವರು ವಿಶ್ವದಾಖಲೆಯೊಡನೆ ಚಿನ್ನ ಗೆದ್ದಿದ್ದರು.

1965ರ ಭಾರತ–ಪಾಕ್ ಯುದ್ಧದ ವೇಲೆ ಗುಂಡಿನ ಗಾಯದಿಂದ ಅವರು ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡಿದ್ದರು. ಮೂಲತಃ ಬಾಕ್ಸರ್‌ ಆಗಿದ್ದ ಅವರು ನಂತರ ಪ್ಯಾರಾ ಈಜಿನಲ್ಲಿ ಆಸಕ್ತಿ ಬೆಳೆಸಿಕೊಂಡು ಯಶಸ್ಸು ಪಡೆದವರು.

ಅವರಿಗೆ ಮೆಚ್ಚುಗೆ ಸೂಚಿಸಿದವರಲ್ಲಿ ನಟ ಕಾರ್ತಿಕ್ ಆರ್ಯನ್ ಒಳಗೊಂಡಿದ್ದರು. ಪೇಟ್ಕರ್ ಅವರ ಸಾಧನೆ ಆಧಾರಿತ ಚಲನಚಿತ್ರ ‘ಚಂದು ಚಾಂ‍ಪಿಯನ್‌’ನಲ್ಲಿ ಅವರು ಪೇಟ್ಕರ್‌ ಪಾತ್ರ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.