ADVERTISEMENT

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌: ಸಿಮ್ರಾನ್‌, ಪ್ರೀತಿ, ನವದೀಪ್‌ಗೆ ಬೆಳ್ಳಿ

ಪಿಟಿಐ
Published 6 ಅಕ್ಟೋಬರ್ 2025, 0:05 IST
Last Updated 6 ಅಕ್ಟೋಬರ್ 2025, 0:05 IST
<div class="paragraphs"><p>ಸಿಮ್ರನ್‌ ಅವರು ಗೈಡ್‌ ಉಮರ್‌ ಸೈಫಿ ಜೊತೆಗೆ ಮಹಿಳೆಯರ 200 ಮೀ. ಓಟದಲ್ಲಿ ಓಡಿದ ರೀತಿ</p></div>

ಸಿಮ್ರನ್‌ ಅವರು ಗೈಡ್‌ ಉಮರ್‌ ಸೈಫಿ ಜೊತೆಗೆ ಮಹಿಳೆಯರ 200 ಮೀ. ಓಟದಲ್ಲಿ ಓಡಿದ ರೀತಿ

   

ನವದೆಹಲಿ: ಬಳಲಿಕೆ ಮತ್ತು ಬೆನ್ನುನೋವಿನ ನಡುವೆಯೂ ಸ್ಫೂರ್ತಿಯಿಂದ ಓಡಿದ ಸಿಮ್ರಾನ್ ಶರ್ಮಾ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 200 ಮೀ. (ಟಿ12 ಕ್ಲಾಸ್) ಓಟದಲ್ಲಿ ಬೆಳ್ಳಿ ಪದಕ ಗೆದ್ದರು. ಭಾನುವಾರ ಮುಕ್ತಾಯಗೊಂಡ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ದಾಖಲೆಯ 22 ಪದಕಗಳನ್ನು ಗೆದ್ದುಕೊಂಡಿತು.

ಕೊನೆಯ ದಿನ ಆತಿಥೇಯ ಅಥ್ಲೀಟುಗಳು ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಪಡೆದರು. ಭಾರತ ಒಟ್ಟು 6 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ 10ನೇ ಸ್ಥಾನ ಪಡೆಯಿತು. ಆದರೆ ಶನಿವಾರದ ಸ್ಪರ್ಧೆಯಲ್ಲಿ ಪ್ರವೀಣ್‌ ಮತ್ತು ಭಾನುವಾರ ನವದೀಪ್‌ ತಮ್ಮ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರುತಿತ್ತು.‌

ADVERTISEMENT

ಬ್ರೆಜಿಲ್‌ ತಂಡ 44 ಪದಕಗಳೊಡನೆ (15–20–9) ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಚೀನಾ 52 ಪದಕಗಳೊಡನೆ (13–22–17) ಎರಡನೇ ಸ್ಥಾನ ಗಳಿಸಿತು. ಇರಾನ್ 16 ಪದಕ ಗಳಿಸಿ (9–2–5) ಮೂರನೇ ಸ್ಥಾನದಲ್ಲಿ ಗಳಿಸಿತು.

ಮಹಿಳೆಯರ 100 ಮೀ. (ಟಿ35) ಓಟದಲ್ಲಿ ಪ್ರೀತಿ ಪಾಲ್‌ ಗಟ್ಟಿ ಮನೋಬಲ ಪ್ರದರ್ಶಿಸಿ ಬೆಳ್ಳಿ ಪದಕ ಗೆದ್ದರು. ಈ ಓಟದ ಆರಂಭದಲ್ಲಿ ಸ್ಟಾರ್ಟರ್‌ ಅವರ ಪಿಸ್ತೂಲ್ ಕೈಕೊಟ್ಟಿದ್ದರಿಂದ ಅರ್ಧ ಓಟದಿಂದ ಹಿಂತಿರುಗಿ ಮತ್ತೊಮ್ಮೆ ಓಡಬೇಕಾಯಿತು. ಈ ಕ್ಲಾಸ್‌ನಲ್ಲಿ ಅಥ್ಲೀಟುಗಳು ಸಹಾಯಕರ ನೆರವು ಪಡೆಯಬೇಕಾಗುತ್ತದೆ. ಸೆರೆಬ್ರಲ್ ಪಾಲ್ಸಿಯಂಥ ಸಮಸ್ಯೆಯಿರುವವರು ಇಲ್ಲಿ ಕಣದಲ್ಲಿರುತ್ತಾರೆ.

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಚಿನ್ನ ವಿಜೇತ ನವದೀಪ್‌ ಸಿಂಗ್‌ ಎಫ್‌41 ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಫೇವರಿಟ್‌ ಆಗಿದ್ದರು. ಆದರೆ ಅವರೂ ಬೆಳ್ಳಿ ಪದಕ ಗೆಲ್ಲಲಷ್ಟೇ ಶಕ್ತರಾದರು. 24 ವರ್ಷ ವಯಸ್ಸಿನ ನವದೀಪ್ 45.46 ಮೀ. ದೂರ ಎಸೆದರು. ಇರಾನ್‌ನ ಸದೆಗ್ ಬಿಯೆತ್ ಸಯಾ (48.46) ಅವರಿಗೆ ಚಿನ್ನ ಗೆಲ್ಲುವ ಹಾದಿಯಲ್ಲಿ ಪೈಪೋಟಿ ಎದುರಾಗಲಿಲ್ಲ.

ಪುರುಷರ 200 ಮೀ. (ಟಿ44 ಕ್ಲಾಸ್‌) ಓಟದಲ್ಲಿ ಸಂದೀಪ್‌ 23.60 ಸೆ.ಗಳಲ್ಲಿ ಓಡಿ ಕಂಚಿನ ಪದಕ ಗೆದ್ದರು. ಈ ವಿಭಾಗದಲ್ಲಿ ಓಡುವ ಅಥ್ಲೀಟುಗಳ ಒಂದು ಕಾಲು ಮಾತ್ರ ಸುಸ್ಥಿತಿಯಲ್ಲಿದ್ದು, ಇನ್ನೊಂದು ಮೊಣಕಾಲಿನವರೆಗೆ ಮಾತ್ರ ಇರುತ್ತದೆ.

ಎರಡನೇ ಪದಕ: ಶುಕ್ರವಾರ ಟಿ12ನಲ್ಲಿ 100 ಮೀ. ಚಿನ್ನ ಗೆದ್ದಿದ್ದ ಉತ್ತರಪ್ರದೇಶದ ಸಿಮ್ರನ್‌ 200 ಮೀ. ಓಟವನ್ನು 24.46 ಸೆ.ಗಳಲ್ಲಿ ಕ್ರಮಿಸಿ ಬೆಳ್ಳಿ ಗೆದ್ದರು. ಇದು ಅವರಿಗೆ ವಿಶ್ವಕೂಟದಲ್ಲಿ ಮೂರನೇ ಪದಕ. ಕೋಬೆಯಲ್ಲಿ ಅವರು ಇದೇ ಓಟದಲ್ಲಿ ಸ್ವರ್ಣ ಗೆದ್ದಿದ್ದರು. ಬ್ರೆಜಿಲ್‌ನ ಕ್ಲಾರಾ ಬಾರೋಸ್‌ ಡಿಸಿಲ್ವ (24.42 ಸೆ.) ಚಿನ್ನ ಗೆದ್ದರು. 

ಮಹಿಳೆಯರ ಟಿ35 ಕ್ಲಾಸ್‌ನ 100 ಮೀ. ಓಟದಲ್ಲಿ ಪ್ರೀತಿ ಪಾಲ್‌ 14.33 ಸೆ.ಗಳಲ್ಲಿ ಗುರಿಮುಟ್ಟಿದರು. ಚೀನಾದ ಗುವೊ ಕ್ವಿಯಾನ್‌ಕ್ವಿನ್ (14.24) ಮೊದಲಿಗರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.