
ನವದೆಹಲಿ: ಭಾರತದ ಪ್ರಮೋದ್ ಭಗತ್ ಅವರು ಚೀನಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಚಿನ್ನ ಗೆದರೆ, ಸುಕಾಂತ ಕದಂ ಮತ್ತು ಕೃಷ್ಣ ನಗರ್ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಅನುಭವಿ ಪ್ರಮೋದ್ ಭಾಗವತ್ ಅವರು 18 ತಿಂಗಳ ಅಮಾನತಿನ ನಂತರ ಆಟಕ್ಕೆ ಸ್ಮರಣೀಯ ಪುನರಾಗಮನ ಮಾಡಿದ್ದು ಪುರುಷರ ಎಸ್‌ಎಲ್3 ವಿಭಾಗದ ಸಿಂಗಲ್ಸ್‌ನಲ್ಲಿ ಭಾನುವಾರ ಚಿನ್ನದ ಗೆದ್ದುಕೊಂಡರು.
ಪ್ರಮೋದ್, ಉತ್ತಮ ಹೋರಾಟ ಕಂಡ ಫೈನಲ್‌ನಲ್ಲಿ ಇಂಡೊನೇಷ್ಯಾದ ಮುಹ ಅಲ್ ಇಮ್ರಾನ್ ಎದುರು ಮೊದಲ ಸೆಟ್ ಸೋತರೂ ನಂತರ 21–19, 21–16 ರಲ್ಲಿ ಜಯಗಳಿಸಿದರು. ಉದ್ದೀಪನ ಮದ್ದು ತಪಾಸಣೆ ಸಿಬ್ಬಂದಿಗೆ ಮೂರು ಬಾರಿ ವಾಸ್ತವ್ಯದ ವಿವರ ನೀಡದ ಕಾರಣ ಅವರು 2024ರಲ್ಲಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕಳೆದುಕೊಂಡಿದ್ದರು. ಅಮಾನತು ಶಿಕ್ಷೆ ಪೂರೈಸಿದ ಅವರಿಗೆ ಇದು ಭಾವನಾತ್ಮಕ ಪುನರಾಗಮನ ಎನಿಸಿತು.
ವಿಶ್ವದ ಅಗ್ರಮಾನ್ಯ ಆಟಗಾರ ಕದಂ ಅವರಿಗೆ ಎಸ್‌ಎಲ್4 ವಿಭಾಗದಲ್ಲಿ ಕಠಿಣ ಡ್ರಾ ಎದುರಾಗಿತ್ತು. ಅವರು ಫೈನಲ್‌ನಲ್ಲಿ ಫ್ರಾನ್ಸ್‌ನ ಲುಕಾಸ್ ಮಝುರ್ ಅವರಿಗೆ 9–21, 8–21ರಲ್ಲಿ ಸೋತರು.
ಟೋಕಿಯೊ 2020 ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಕೃಷ್ಣಅವರು ಪುರುಷರ ಸಿಂಗಲ್ಸ್‌ನ ಎಸ್‌ಎಚ್ 6 ವಿಭಾಗದಲ್ಲಿ ಬೆಳ್ಳಿ ಗೆದ್ದರು. ಅವರು ಫೈನಲ್‌ನಲ್ಲಿ ಥಾಯ್ಲೆಂಡ್‌ನ ನತ್ತಪೊಂಗ್ ಮೀಚೈ ಅವರಿಗೆ 22–20, 7–21, 17–21ರಲ್ಲಿ ಸೋಲನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.