ADVERTISEMENT

ವಿಕಾಸ್‌, ಪರಮ್‌ಜೀತ್‌ಗೆ ಒಲಿಂಪಿಕ್ಸ್ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 18:41 IST
Last Updated 19 ಮಾರ್ಚ್ 2023, 18:41 IST
   

ನೋಮಿ, ಜಪಾನ್‌ : 20 ಕಿಲೊ ಮೀಟರ್ಸ್ ರೇಸ್‌ವಾಕ್‌ ಸ್ಪರ್ಧಿಗಳಾದ ಭಾರತದ ವಿಕಾಸ್‌ ಸಿಂಗ್ ಮತ್ತು ಪರಮ್‌ಜೀತ್ ಸಿಂಗ್ ಬಿಸ್ತ್‌ ಅವರು 2024ರ ಪ್ಯಾರಿಸ್‌ ಒಲಿಂಪಿಕ್ಸ್ ಮತ್ತು ಈ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದಾರೆ.

ಇಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ ಪುರುಷರ ಓಪನ್ ವಿಭಾಗದ ಸ್ಪರ್ಧೆಯಲ್ಲಿ ವಿಕಾಸ್‌ ಮತ್ತು ಪರಮ್‌ಜೀತ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ವಿಕಾಸ್‌ 1 ತಾಸು 20 ನಿಮಿಷ 5 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ಪರಮ್‌ಜೀತ್‌ 1 ತಾಸು 20 ನಿ. 8 ಸೆ.ಗಳಲ್ಲಿ ರೇಸ್‌ ಪೂರ್ಣಗೊಳಿಸಿದರು. ಚೀನಾದ ಕಿಯಾನ್‌ ಹೈಫೆಂಗ್‌
(1 ತಾಸು 19.09 ನಿ.) ಅಗ್ರಸ್ಥಾನ ಗಳಿಸಿದರು.

ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಈಗಾಗಲೇ ಅರ್ಹತೆ ಗಳಿಸಿರುವ ಅಕ್ಷದೀಪ್ ಸಿಂಗ್ ಇಲ್ಲಿ ಐದನೇ ಸ್ಥಾನ (1 ತಾಸು 20 ನಿ. 57ಸೆ.) ಪಡೆದರು.

ADVERTISEMENT

ಭಾರತದ ಇನ್ನುಳಿದ ಸ್ಪರ್ಧಿಗಳಾದ ಸೂರಜ್ ಪನ್ವಾರ್‌ ಮತ್ತು ಹರದೀಪ್‌ ಕ್ರಮವಾಗಿ 1 ತಾಸು 22 ನಿ. 31 ಸೆ. ಮತ್ತು 1 ತಾಸು 25 ನಿ. 38 ಸೆ.ಗಳಲ್ಲಿ ರೇಸ್‌ ಪೂರ್ಣಗೊಳಿಸಿದರು.

ಮಹಿಳೆಯರ ಓಪನ್‌ ವಿಭಾಗದಲ್ಲಿ ಪ್ರಿಯಾಂಕಾ ಗೋಸ್ವಾಮಿ ಈಗಾಗಲೇ ಎರಡೂ ಕೂಟಗಳಿಗೆ ಅರ್ಹತೆ ಗಳಿಸಿದ್ದು, ಇಲ್ಲಿ ನಾಲ್ಕನೇ ಸ್ಥಾನ ಗಳಿಸಿದರು.

ಭಾರತದ ಇತರ ಸ್ಪರ್ಧಿಗಳಾದ ಮುನಿತಾ ಪ್ರಜಾಪತಿ ಮತ್ತು ಭಾವನಾ ಜಾಟ್‌ ಅವರು ಅರ್ಹತೆ ಪಡೆಯುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.