ಪ್ಯಾರಿಸ್ (ಪಿಟಿಐ): ಭಾರತ ಹಾಕಿ ತಂಡವು ಬಲಾಢ್ಯ ನ್ಯೂಜಿಲೆಂಡ್ ಪಡೆಯು ಒಡ್ಡಿದ ಕಠಿಣ ಪೈಪೋಟಿಯನ್ನು ಮೀರಿ ನಿಂತಿತು.
ಶನಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 3–2ರಿಂದ ನ್ಯೂಜಿಲೆಂಡ್ ಎದುರು ಜಯಿಸಿತು.
ಪಂದ್ಯದ ಎಂಟನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ನ್ಯೂಜಿಲೆಂಡ್ ತಂಡವು 1–0 ಗೋಲು ಮುನ್ನಡೆ ಸಾಧಿಸಿತು. ಸ್ಯಾಮ್ ಲೇನ್ ಗೋಲು ಹೊಡೆದರು.
ಭಾರತ ತಂಡವು ಸತತ ಪ್ರಯತ್ನದ ಮೂಲಕ 24ನೇ ನಿಮಿಷದಲ್ಲಿ ತಿರುಗೇಟು ನೀಡಿತು. ಮನದೀಪ್ ಸಿಂಗ್ ಪೆನಾಲ್ಟಿ ಕಾರ್ನರ್‌ನಲ್ಲಿ ರಿಬೌಂಡ್ ಮಾಡಿ ಗೋಲು ಗಳಿಸಿದರು. ಇದರಿಂದ 1–1ರ ಸಮಬಲವಾಯಿತು. ಮೂರನೇ ಕ್ವಾರ್ಟರ್‌ನಲ್ಲಿ ವಿವೇಕ್ ಸಾಗರ್ ಅವರು ಹೊಡೆದ ಗೋಲು ಭಾರತಕ್ಕೆ ಮುನ್ನಡೆ ಒದಗಿಸಿತು.
ನ್ಯೂಜಿಲೆಂಡ್ ತಂಡದ ಸೈಮನ್ ಚೈಲ್ಡ್ ಅವರು 53ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ 2–2ರ ಸಮಬಲ ಒದಗಿಸಿದರು. ಇದರಿಂದಾಗಿ ನಂತರದ ಅವಧಿಯಲ್ಲಿ ಪಂದ್ಯವು ರೋಚಕ ತಿರುವು ಪಡೆಯಿತು.
ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಉಭಯ ತಂಡಗಳ ಆಟಗಾರರ ಪೈಪೋಟಿ ಹೆಚ್ಚಾಯಿತು. ಪಂದ್ಯದ ಮುಕ್ತಾಯದ ಹೂಟರ್ ಮೊಳಗುವ ಒಂದು ನಿಮಿಷ ಬಾಕಿಯಿದ್ದಾಗ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿದರು. ಇದರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಸೋಮವಾರ ನಡೆಯುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. 2020ರ ಟೋಕಿಯೊ
ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸಿತ್ತು. 40 ವರ್ಷಗಳ ನಂತರ ಒಲಿಂಪಿಕ್ಸ್ ಪದಕ ಜಯಿಸಿದ ಸಾಧನೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.