ADVERTISEMENT

Paris Olympics | ರಿಲೆ: ಭಾರತ ತಂಡಗಳಿಗೆ ನಿರಾಸೆ

ಪಿಟಿಐ
Published 9 ಆಗಸ್ಟ್ 2024, 23:01 IST
Last Updated 9 ಆಗಸ್ಟ್ 2024, 23:01 IST
<div class="paragraphs"><p>ಪ್ಯಾರಿಸ್‌ ಒಲಿಂಪಿಕ್ಸ್‌ ಪುರುಷರ 4 x 400 ಮೀ. ರಿಲೆ ಹೀಟ್‌ ರೇಸ್‌ನಲ್ಲಿ ಓಡುತ್ತಿರುವ ಭಾರತದ ಮುಹಮ್ಮೆದ್‌ ಅಜ್ಮಲ್‌ ಮತ್ತು ಮುಹಮ್ಮೆದ್‌ ಅನಾಸ್‌ ಯಾಹಿಯಾ (ಬಿಳಿ ಧಿರಿಸು) – ಪಿಟಿಐ ಚಿತ್ರ</p></div>

ಪ್ಯಾರಿಸ್‌ ಒಲಿಂಪಿಕ್ಸ್‌ ಪುರುಷರ 4 x 400 ಮೀ. ರಿಲೆ ಹೀಟ್‌ ರೇಸ್‌ನಲ್ಲಿ ಓಡುತ್ತಿರುವ ಭಾರತದ ಮುಹಮ್ಮೆದ್‌ ಅಜ್ಮಲ್‌ ಮತ್ತು ಮುಹಮ್ಮೆದ್‌ ಅನಾಸ್‌ ಯಾಹಿಯಾ (ಬಿಳಿ ಧಿರಿಸು) – ಪಿಟಿಐ ಚಿತ್ರ

   

ಪ್ಯಾರಿಸ್‌: ಭಾರತ ಪುರುಷರ  4x400 ಮೀ. ರಿಲೆ ತಂಡವು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತನ್ನ ಮೇಲಿದ್ದ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫಲವಾಯಿತು. ಶುಕ್ರವಾರ ನಡೆದ ಹೀಟ್‌ ರೇಸ್‌ನಲ್ಲಿ ಒಟ್ಟಾರೆ 10ನೇ ಸ್ಥಾನ ಪಡೆದ ತಂಡಕ್ಕೆ ಅಂತಿಮ ಸುತ್ತಿಗೇರಲು ಸಾಧ್ಯವಾಗಲಿಲ್ಲ.

ಮೊಹಮ್ಮದ್ ಅನಾಸ್ ಯಾಹಿಯಾ, ಮೊಹಮ್ಮದ್ ಅಜ್ಮಲ್‌, ಅಮೊಜ್‌ ಜೇಕಬ್‌ ಮತ್ತು ರಾಜೇಶ್‌ ರಮೇಶ್‌ ಅವರನ್ನೊಳಗೊಂಡ ತಂಡವು ಈ ಋತುವಿನ ಶ್ರೇಷ್ಠ 3 ನಿಮಿಷ 0.58 ಸೆಕೆಂಡುಗಳಲ್ಲಿ ಗುರಿ ತಲುಪಿತು. ಆದರೆ ಇದರಿಂದ ಹೀಟ್‌ 2ರಲ್ಲಿ ನಾಲ್ಕನೇ ಸ್ಥಾನ ಮತ್ತು ಒಟ್ಟಾರೆ 16 ತಂಡಗಳಲ್ಲಿ 10ನೇ ಸ್ಥಾನ ಪಡೆಯಲು ಮಾತ್ರ ಸಾಧ್ಯವಾಯಿತು. ಎರಡೂ ಹೀಟ್‌ಗಳಲ್ಲಿ ಅಗ್ರಸ್ಥಾನ ಪಡೆದ ಮೂರು ತಂಡಗಳ ಜೊತೆಗೆ ವೇಗವಾಗಿ ಗುರಿ ತಲುಪಿದ ಮತ್ತೆರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ADVERTISEMENT

ಹೀಟ್‌ ಎರಡರಲ್ಲಿ ಬೋಟ್ಸ್‌ವಾನಾ, ಬ್ರಿಟನ್‌, ಅಮೆರಿಕ ತಂಡಗಳು ಅಗ್ರಸ್ಥಾನ ಪಡೆದವು. ಜಪಾನ್‌ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 

ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 2 ನಿಮಿಷ 59.05 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಭಾರತ ತಂಡ ಏಷ್ಯನ್‌ ದಾಖಲೆಯನ್ನು ಹೊಂದಿದೆ. ಈ ಕೂಟದಲ್ಲಿ ಭಾರತ ತಂಡ ಅಸಾಧಾರಣ ದಾಖಲೆ ಹೊಂದಿರುವ ಅಮೆರಿಕದ ರಿಲೆ ತಂಡದೊಂದಿಗೆ ಪೈಪೋಟಿ ನಡೆಸಿತ್ತು.

ಪುರುಷರ ತಂಡ ಅಂತಿಮ ಸುತ್ತಿಗೆ ಅರ್ಹತೆ ‍ಪಡೆಯುತ್ತದೆ ಎಂದು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ ಹೆಚ್ಚಿನ ನಿರೀಕ್ಷೆ ಹೊಂದಿತ್ತು.  ಆದರೆ ಅಂತಿಮವಾಗಿ ಅದು ಸಾಧ್ಯವಾಗಲಿಲ್ಲ.

ಮಹಿಳೆಯರ 4x400 ಮೀ ರಿಲೆ ತಂಡ ಕೂಡಾ ಅಂತಿಮ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲವಾಯಿತು. ಮೊದಲ ಸುತ್ತು ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದ ತಂಡ ಒಟ್ಟಾರೆ 16 ತಂಡಗಳ ಪೈಕಿ 15ನೇ ಸ್ಥಾನ ಪಡೆಯಿತು. ವಿದ್ಯಾ ರಾಮರಾಜ್‌, ಜ್ಯೋತಿಕಾ ಶ್ರೀದಂಡಿ, ಎಂ.ಆರ್‌.ಪೂವಮ್ಮ ಮತ್ತು ಶುಭಾ ವೆಂಕಟೇಶನ್‌ ಅವರನ್ನೊಳಗೊಂಡ ತಂಡ ಹೀಟ್‌ನಲ್ಲಿ 3 ನಿಮಿಷ 32.51 ಸೆಕೆಂಡುಗಳಲ್ಲಿ ಗುರಿ ತಲುಪಿ ಕೊನೆಯ 8ನೇ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.