ADVERTISEMENT

Paris Olympics | ಟೇಬಲ್ ಟೆನಿಸ್: ಪ್ರಿ ಕ್ವಾರ್ಟರ್‌ಗೆ ಶ್ರೀಜಾ ಅಕುಲಾ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:09 IST
Last Updated 31 ಜುಲೈ 2024, 14:09 IST
<div class="paragraphs"><p>ಭಾರತದ ಶ್ರೀಜಾ ಅಕುಲಾ </p></div>

ಭಾರತದ ಶ್ರೀಜಾ ಅಕುಲಾ

   

ಪಿಟಿಐ ಚಿತ್ರ

ಪ್ಯಾರಿಸ್‌: ಭಾರತದ ಟೇಬಲ್‌ ಟೆನಿಸ್ ತಾರೆ ಶ್ರೀಜಾ ಅಕುಲಾ ಬುಧವಾರ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ 16ರ ಘಟ್ಟ ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

ADVERTISEMENT

26ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿದ್ದ ಶ್ರೀ ಅವರು 32ರ ಘಟ್ಟದ ಪಂದ್ಯದಲ್ಲಿ 9-11, 12-10, 11-4, 11-5, 10-12, 12-10 (4–2)ರಿಂದ ಸಿಂಗಪುರದ ಜಿಯಾನ್ ಝೆಂಗ್‌ ಅವರನ್ನು ಹಿಮ್ಮೆಟ್ಟಿಸಿದರು.

ಮಣಿಕಾ ಬಾತ್ರಾ ಅವರು ಸೋಮವಾರ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ದಾಖಲೆ ಬರೆದಿದ್ದರು. ಟೇಬಲ್‌ ಟೆನಿಸ್‌ನ ಇಬ್ಬರು ಆಟಗಾರ್ತಿಯರು 16ರ ಘಟ್ಟ ಪ್ರವೇಶಿಸಿರುವುದು ಭಾರತದ ಟೇಬಲ್ ಟೆನಿಸ್ ಇತಿಹಾಸದಲ್ಲಿ ಅಭೂತಪೂರ್ವ ಸಾಧನೆಯಾಗಿದೆ.

ಆರಂಭಿಕ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಶ್ರೀಜಾ ನಂತರ ಲಯ ಕಂಡುಕೊಂಡ ಅವರು ಸತತ ಮೂರು ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿದರು. ಐದನೇ ಗೇಮ್‌ನಲ್ಲಿ ಮತ್ತೆ ಸಿಂಗಪುರದ ಆಟಗಾರ್ತಿ ತಿರುಗೇಟು ನೀಡಿದರೂ, ಆರನೇ ಗೇಮ್‌ನ ಭಾರತದ ಆಟಗಾರ್ತಿ ಹಿಡಿತ ಸಾಧಿಸಿ ಮುಂದಿನ ಸುತ್ತಿಗೆ ಲಗ್ಗೆ ಹಾಕಿದರು. 

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಜಾ ಅವರು ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸನ್ ಯಿಂಗ್ಶಾ (ಚೀನಾ) ವಿರುದ್ಧ ಸೆಣಸಲಿದ್ದಾರೆ.

ಶ್ರೀಜಾ ಕಳೆದ ತಿಂಗಳು ವಿಶ್ವ ರ‍್ಯಾಂಕಿಂಗ್‌ನಲ್ಲಿ 24ನೇ ಸ್ಥಾನಕ್ಕೆ ಏರಿದ್ದು, ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿದೆ. ಮಣಿಕಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿದ್ದಾರೆ.

ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಶ್ರೀಜಾ ಕೆಲ ವಾರಗಳ ಹಿಂದೆ ಡಬ್ಲ್ಯುಟಿಟಿ ಕಂಟೆಂಡರ್‌ನಲ್ಲಿ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.