ADVERTISEMENT

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಸೆಮಿಫೈನಲ್‌ನತ್ತ ರ‍್ಯಾಪ್ಟರ್ಸ್ ಹೆಜ್ಜೆ

ಪರುಪಳ್ಳಿ ಕಶ್ಯಪ್‌ಗೆ ಸಾಯಿ ಪ್ರಣೀತ್ ಎದುರು ಸೋಲು

ವಿಕ್ರಂ ಕಾಂತಿಕೆರೆ
Published 10 ಜನವರಿ 2019, 20:15 IST
Last Updated 10 ಜನವರಿ 2019, 20:15 IST
ಪರುಪಳ್ಳಿ ಕಶ್ಯಪ್ ಎದುರಿನ ಪಂದ್ಯದಲ್ಲಿ ಷಟಲ್ ಹಿಂದಿರುಗಿಸಿದ ಬಿ.ಸಾಯಿ ಪ್ರಣೀತ್‌ –ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ
ಪರುಪಳ್ಳಿ ಕಶ್ಯಪ್ ಎದುರಿನ ಪಂದ್ಯದಲ್ಲಿ ಷಟಲ್ ಹಿಂದಿರುಗಿಸಿದ ಬಿ.ಸಾಯಿ ಪ್ರಣೀತ್‌ –ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ಸೆಮಿಫೈನಲ್ ಕನಸಿನೊಂದಿಗೆ ಕಣಕ್ಕೆ ಇಳಿದ ಆತಿಥೇಯಬೆಂಗಳೂರು ರ‍್ಯಾಪ್ಟರ್ಸ್‌ ತಂಡ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ.ಗುರುವಾರ ರಾತ್ರಿಚೆನ್ನೈ ಸ್ಯ್ಮಾಷರ್ಸ್‌ ಎದುರು ನಡೆದಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ (ಪಿಬಿಎಲ್‌) ಹಣಾಹಣಿಯ ಮೊದಲ ಮೂರು ಪಂದ್ಯಗಳ ಮುಕ್ತಾ ಯಕ್ಕೆ ರ‍್ಯಾಪ್ಟರ್ಸ್‌ ತಂಡ 3–0 ಮುನ್ನಡೆ ಗಳಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಲೀಗ್‌ ಹಣಾಹಣಿ ಎರಡೂ ತಂಡಗಳಿಗೆ ಮಹತ್ವದ್ದಾಗಿತ್ತು. ರ‍್ಯಾಪ್ಟರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ ಈ ಹಣಾಹಣಿ ಸೋತರೆ ಸೆಮಿಫೈನಲ್ ಕನಸು ಭಗ್ನವಾಗುವ ಆತಂಕ ಇತ್ತು. ಆರನೇ ಸ್ಥಾನದಲ್ಲಿರುವ ಸ್ಮಾಷರ್ಸ್‌ಗೆ ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಈ ಹಣಾಹಣಿಯ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ ಇತ್ತು. ಸ್ಯ್ಮಾಷರ್ಸ್‌ ಕನಸಿನ ಹಕ್ಕಿಗೆ ರೆಕ್ಕೆ ಜೋಡಿಸಿದವರು ಕ್ರಿಸ್ ಅಡ್ಕಾಕ್‌ ಮತ್ತು ಚಿನ್ ಚುಂಗ್ ಜೋಡಿ. ಪುರುಷರ ಡಬಲ್ಸ್‌ ಪಂದ್ಯದಲ್ಲಿ ಈ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸತ್ಯವಾನ್‌ ಅವರನ್ನು 14–15, 15–9, 15–11ರಿಂದ ಮಣಿಸಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು.

ಬಲಿಷ್ಠ ಜೋಡಿಗಳ ನಡುವಿನ ಪೈಪೋಟಿ ಬ್ಯಾಡ್ಮಿಂಟನ್‌ ಪ್ರಿಯರನ್ನು ರೋಮಾಂಚನಗೊಳಿಸಿತು. ಮೊದಲ ಗೇಮ್‌ನಲ್ಲಿ ಎರಡೂ ತಂಡಗಳ ಆಟಗಾರರು ಚಾಕಚಕ್ಯ ಆಟದ ಮೂಲಕ ಗಮನ ಸೆಳೆದರು. ಅಡ್ಕಾಕ್ ಅವರ ಬಲಶಾಲಿ ಸ್ಮ್ಯಾಷ್‌ಗಳು ಮತ್ತು ಸತ್ಯವಾನ್ ಅವರ ಚುರುಕಿನ ಪಾದಚಲನೆಗೆ ಚಪ್ಪಾಳೆಯ ಮಳೆ ಸುರಿಯಿತು. ಮೊದಲ ಗೇಮ್‌ನಲ್ಲಿ ಒಂದು ಪಾಯಿಂಟ್ ಅಂತರದಿಂದ ಸೋತ ಸ್ಮ್ಯಾಷರ್ಸ್‌ ಜೋಡಿ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿತು. 15–9ರಿಂದ ಗೆದ್ದು ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿತು. ನಿರ್ಣಾಯಕ ಗೇಮ್‌ನಲ್ಲಿ ಅಡ್ಕಾಕ್ –ಚಿನ್ ಚುಂಗ್ ಮೋಡಿ ಮಾಡಿದರು. ತಿರುಗೇಟು ನೀಡಲು ಪ್ರಯತ್ನಿಸಿದ ಸತ್ಯವಾನ್‌–ಅಹ್ಸಾನ್‌ ಸ್ವಯಂ ತಪ್ಪುಗಳನ್ನು ಎಸಗಿ ಸೋಲಿಗೆ ಶರಣಾದರು. ಅಂಗಣದ ಮಧ್ಯದಲ್ಲಿ ಬಲಶಾಲಿ ಸ್ಮ್ಯಾಷ್ ಸಿಡಿಸಿ ಮ್ಯಾಚ್ ಪಾಯಿಂಟ್ ಗಳಿಸಿದ ಅಡ್ಕಾಕ್‌ ಅವರು ಚೆನ್ನೈ ಡಗ್‌ ಔಟ್‌ನಲ್ಲಿ ಸಂಭ್ರಮ ಅಲೆಯಾಡುವಂತೆ ಮಾಡಿದರು.

ADVERTISEMENT

ಕಶ್ಯಪ್‌–ಪ್ರಣೀತ್‌ ಆಟದ ರಸದೂಟ:ಎರಡನೇ ಪಂದ್ಯದಲ್ಲಿ ಸ್ಮ್ಯಾಷರ್ಸ್‌ನ ಟ್ರಂಪ್‌ ಸವಾಲು ಹೊತ್ತು ಬಂದವರು ಪರುಪಳ್ಳಿ ಕಶ್ಯಪ್‌. ಎದುರಾಳಿಯಾಗಿದ್ದವರು ಬಿ.ಸಾಯ್ ಪ್ರಣೀತ್‌. ತಮ್ಮದೇ ಸರ್ವ್‌ನಲ್ಲಿ ಭರ್ಜರಿ ಸ್ಮ್ಯಾಷ್ ಸಿಡಿಸಿ ಪಂದ್ಯದ ಮೊದಲ ಪಾಯಿಂಟ್ ಗಳಿಸಿದ ಕಶ್ಯಪ್‌ಗೆ ಪ್ರಣೀತ್ ಪ್ರತಿ ಹಂತದಲ್ಲೂ ಪೈಪೋಟಿ ನೀಡಿದರು. ಸುದೀರ್ಘ ರ‍್ಯಾಲಿಗಳು ಪ್ರೇಕ್ಷಕರಿಗೆ ಮುದ ನೀಡಿದವು. ಕಶ್ಯಪ್‌ ಅವರ ಸ್ಮ್ಯಾಷ್‌ಗಳು ಮತ್ತು ಪ್ರಣೀತ್ ಅವರ ಬ್ಯಾಕ್‌ಹ್ಯಾಂಡ್ ಶಾಟ್‌ಗಳಿಗೆ ಮಾರುಹೋದ ಉದ್ಯಾನ ನಗರಿಯ ಬ್ಯಾಡ್ಮಿಂಟನ್‌ ಪ್ರಿಯರು ಸಂತಸದ ಹೊಳೆಯಲ್ಲಿ ಮಿಂದರು. ಎರಡೂ ಗೇಮ್‌ಗಳಲ್ಲಿ ಆಧಿಪತ್ಯ ಸ್ಥಾಪಿಸಿದ ಪ್ರಣೀತ್‌ 15–11, 15–12ರಲ್ಲಿ ಗೆದ್ದು ಎರಡು ಪಾಯಿಂಟ್‌ಗಳನ್ನು ಕಬಳಿಸಿದರು.

ಶ್ರೀಕಾಂತ್‌ಗೆ ಮಣಿದ ವೀ ಫೆಂಗ್ ಚಾಂಗ್‌
ಪುರುಷರ ಸಿಂಗಲ್ಸ್‌ನ ಎರಡನೇ ಪಂದ್ಯದಲ್ಲಿವೀ ಫೆಂಗ್ ಚಾಂಗ್‌ ಅವರನ್ನು ಸುಲಭವಾಗಿ ಮಣಿಸಿದ ನಾಯಕ ಕಿದಂಬಿ ಶ್ರೀಕಾಂತ್‌ ಬೆಂಗಳೂರು ರ‍್ಯಾಪ್ಟರ್ಸ್‌ನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು. ಈ ಪಂದ್ಯ ಮುಗಿದಾಗ ರ‍್ಯಾಪ್ಟರ್ಸ್‌ ತಂಡದ ಮುನ್ನಡೆ 3–0ಗೆ ಏರಿತು.

ಚೆಂಗ್‌ ಸರ್ವಿಸ್‌ಗೆ ಕ್ರಾಸ್ ಕಾರ್ಟ್ ಶಾಟ್ ಮೂಲಕ ಮೊದಲ ಪಾಯಿಂಟ್ ಹೆಕ್ಕಿದ ಕಿದಂಬಿ ಶ್ರೀಕಾಂತ್‌ ಆರಂಭದಲ್ಲೇ ತಮ್ಮ ರಣನೀತಿಯನ್ನು ಜಾಹೀರು ಮಾಡಿದರು. ನೆಟ್ ಬಳಿ ಡ್ರಾಪ್ ಮಾಡಿ ಮತ್ತು ಭರ್ಜರಿ ಸ್ಮ್ಯಾಷ್ ಸಿಡಿಸಿ ಮತ್ತೆ ಎರಡು ಪಾಯಿಂಟ್ ಗಳಿಸಿದ ಶ್ರೀಕಾಂತ್‌ ಷಟಲ್‌ ಅನ್ನು ಅಂಗಣದಿಂದ ಹೊರಗೆ ಹಾಕಿ ಮೊದಲ ಪಾಯಿಂಟ್ ಬಿಟ್ಟುಕೊಟ್ಟರು. ತಕ್ಷಣ ಚೇತರಿಸಿಕೊಂಡು ಸ್ಮ್ಯಾಷ್ ಮೂಲಕ ಮುನ್ನಡೆಯನ್ನು 4–1ಕ್ಕೆ ಏರಿಸಿದರು. ಅಮೋಘ ಅಟ ಮುಂದುವರಿಸಿ 15–10ರಿಂದ ಮೊದಲ ಗೇಮ್ ಗೆದ್ದರು.

ಎರಡನೇ ಗೇಮ್‌ನಲ್ಲಿ ಪ್ರತಿರೋಧ ಎದುರಾದರೂ ಶ್ರೀಕಾಂತ್ ಎದೆಗುಂದಲಿಲ್ಲ. ಸ್ಕೋರ್‌ 7–7ರಲ್ಲಿ ಸಮ ಆಗಿದ್ದಾಗ ಭಾರಿ ಸ್ಮ್ಯಾಷ್‌ ಸಿಡಿಸಿ ವಿರಾಮಕ್ಕೆ ತೆರಳಿದರು. ನಂತರ ಜಿದ್ದಾಜಿದ್ದಿಯ ಹೋರಾಟ ಕಂಡು ಬಂತು. 8–8, 9–9ರಲ್ಲಿ ಸ್ಕೋರ್ ಸಮ ಆದ ನಂತರ ಸತತ ತಪ್ಪುಗಳನ್ನು ಎಸಗಿದ ಚಾಂಗ್‌ 10–15ರಿಂದ ಸೋತು ನಿರಾಸೆಗೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.