ADVERTISEMENT

ಪೆಂಕಾಕ್‌ ಸಿಲಟ್‌ ಕರ್ನಾಟಕ ‘ಫಿಟ್’

ಬಸವರಾಜ ದಳವಾಯಿ
Published 4 ಆಗಸ್ಟ್ 2019, 19:30 IST
Last Updated 4 ಆಗಸ್ಟ್ 2019, 19:30 IST
ಪೆಂಕಾಕ್‌ ಸಿಲಟ್‌ ಆಟದ ರೀತಿ
ಪೆಂಕಾಕ್‌ ಸಿಲಟ್‌ ಆಟದ ರೀತಿ   

ಪೆಂಕಾಕ್‌ ಸಿಲಟ್..ಸಮರ ಕಲೆಗೆ ಸಂಬಂಧಿಸಿದ ಪ್ರಾಚೀನ ಆಟ. ಇದು ಸದ್ಯ ಕ್ರೀಡೆಯಾಗಿ ಬೆಳೆದು ವಿಶ್ವದ 150ಕ್ಕಿಂತ ಹೆಚ್ಚು ದೇಶಗಳಿಗೆ ಹಬ್ಬಿದೆ. ಈ ಹಿಂದೆ ಇಂಡೊನೇಷ್ಯಾ ಮತ್ತು ಮಲೇಷ್ಯಾದ ಸೇನೆಯಲ್ಲಿ ಗೆರಿಲ್ಲಾ ಯುದ್ಧರೀತಿಯಲ್ಲಿ ಇದನ್ನು ಬಳಸಲಾಗುತ್ತಿತ್ತು. ಈ ವಿದ್ಯೆ ನಶಿಸಿಹೋಗಬಾರದೆಂಬ ಉದ್ದೇಶದಿಂದ 1980ರ ದಶಕದಲ್ಲಿ ಪ್ರಪಂಚದ ಎಲ್ಲ ಕಡೆಗೂ ಪರಿಚಯಿಸುವ ಯೋಜನೆಯನ್ನು ಆ ದೇಶಗಳು ಹಮ್ಮಿಕೊಂಡವು. 2018ರ ಏಷ್ಯನ್‌ ಕ್ರೀಡಾಕೂಟದಲ್ಲೂ ಇದನ್ನು ಸೇರಿಸಲಾಗಿತ್ತು.

ಸದ್ಯ ಭಾರತದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 32 ರಾಜ್ಯಗಳಲ್ಲಿ ಪೆಂಕಾಕ್‌ ಸಿಲಟ್‌ ಕ್ರೀಡೆ ಪ್ರಚಲಿತದಲ್ಲಿದೆ. ಕರ್ನಾಟಕದಲ್ಲಿ ಕ್ರೀಡೆಯ ಬೆಳವಣಿಗೆ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಪೆಂಕಾಕ್‌ ಸಿಲಟ್‌ ಸಂಸ್ಥೆಯ ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಅನಿಲ್‌ಕುಮಾರ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಪೆಂಕಾಕ್‌ ಸಿಲಟ್‌ ಕ್ರೀಡೆ ಬಗ್ಗೆ ವಿವರಿಸಿ

ADVERTISEMENT

ಇದು ಯಾವುದೇ ಆಯುಧಗಳಿಲ್ಲದೆ ಬರಿಗೈ, ಪರಸ್ಪರ ಸ್ಪರ್ಧಿಗಳು ತುಂಬಾ ಸಮೀಪಕ್ಕೆ ಬಂದು ಕಾಳಗ ನಡೆಸುವ ಕ್ರೀಡೆ. ದೇಶದಲ್ಲಿ ಸದ್ಯ ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರಗಳಲ್ಲಿ ಪ್ರಾಮುಖ್ಯತೆ ಪಡೆದಿದೆ.12, 14, 17 ವರ್ಷದೊಳಗಿನ, 17 ವರ್ಷಕ್ಕಿಂತ ಮೇಲಿನವರ ವಿಭಾಗಗಳಲ್ಲಿ ಆಡಿಸಲಾಗುತ್ತದೆ. 35ರಿಂದ 45 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧಿಸುವುದನ್ನು ಮಾಸ್ಟರ್ಸ್ ಎಂದು ಹೇಳಲಾಗುತ್ತದೆ.

* ರಾಜ್ಯದಲ್ಲಿ ಕ್ರೀಡೆಯ ಬೆಳವಣಿಗೆ ಹೇಗಿದೆ?

ಕರ್ನಾಟಕದಲ್ಲಿ ಸದ್ಯ ತೀವ್ರಗತಿಯ ಬೆಳವಣಿಗೆ ಇದೆ. 1000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಸುಮಾರು 200 ಜನ ವಿದ್ಯಾರ್ಥಿಗಳು ಹೆಸರು ದಾಖಲಿಸಿಕೊಂಡಿದ್ದಾರೆ. ಈ ಸಂಖ್ಯೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು. ಪೆಂಕಾಕ್‌ ಸಿಲಟ್‌ನಲ್ಲಿ ಕರ್ನಾಟಕ ಸದ್ಯ 8ನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ.

* ಭವಿಷ್ಯದ ಯೋಜನೆಗಳ ಬಗ್ಗೆ ಹೇಳಿ...

ಈ ವರ್ಷ ಅಖಿಲ ಭಾರತ ಅಂತರ್‌ವಲಯ ಟೂರ್ನಿಯನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗುವುದು. ಮುಂದಿನ ವರ್ಷದ ಜನವರಿಯಲ್ಲಿ ರಾಜ್ಯಮಟ್ಟದ ಟೂರ್ನಿ ಬೆಂಗಳೂರಿನಲ್ಲಿ ನಡೆಯಲಿದೆ. ಅಂತರ ಶಾಲಾ ಸ್ಪರ್ಧೆಗಳ ಮೂಲಕ ರಾಜ್ಯಮಟ್ಟಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಜೂನಿಯರ್‌ ಅಥವಾ ಸಬ್‌ ಜೂನಿಯರ್‌ ವಿಭಾಗದಲ್ಲಿ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸುವ ಯೋಜನೆಯೂ ಇದೆ. ಇದೇ ಆಗಸ್ಟ್‌ನಲ್ಲಿ ಆಂಧ್ರಪ್ರದೇಶದ ಒಂಗೋಲ್‌ನಲ್ಲಿ ದಕ್ಷಿಣ ವಲಯ ಮಟ್ಟದ ಟೂರ್ನಿ ಆಯೋಜನೆಯಾಗಿದ್ದು, ಇದಕ್ಕಾಗಿ ಕರ್ನಾಟಕ ತಂಡವನ್ನು ಸಜ್ಜು ಗೊಳಿಸಲಾಗುತ್ತಿದೆ. ಪೆಂಕಾಕ್‌ ಸಿಲಟ್‌ ಒಲಿಂಪಿಕ್ಸ್‌ ಕ್ರೀಡೆಗೆ ಸೇರುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.