
ಬೆಂಗಳೂರು: ಭಾರತ ಪಿಕಲ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ಮೊದಲ ಆವೃತ್ತಿಯ ಪಿಕಲ್‌ಬಾಲ್ ರಾಷ್ಟ್ರೀಯ ಟೂರ್ನಿ ಇದೇ 13ರಿಂದ 16ರವರೆಗೆ ಕನಕಪುರ ಮುಖ್ಯರಸ್ತೆಯ ಸ್ಪೋರ್ಟ್ಸ್ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪಿಕಲ್‌ಬಾಲ್ ಸಂಸ್ಥೆಯ ಅಧ್ಯಕ್ಷ ಶ್ರೀಹರ್ಷ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಪಿಕಲ್‌ಬಾಲ್ ಸಂಸ್ಥೆಯ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಯಲ್ಲಿ 20ಕ್ಕೂ ಅಧಿಕ ರಾಜ್ಯಗಳಿಂದ 1200ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 12ರಿಂದ 70ವರ್ಷದವರೆಗಿನ ಸ್ಪರ್ಧಿಗಳು ತಮ್ಮ ಕೌಶಲ ಪ್ರದರ್ಶಿಸಲಿದ್ದಾರೆ. ಪುರುಷರು, ಮಹಿಳೆಯರು ಮತ್ತು ಮಿಶ್ರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
‘ಪಿಕಲ್‌ಬಾಲ್ ಪ್ರಪಂಚದಾದ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಭಾರತದಲ್ಲಿ ಈಚಿನ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತ ಪಿಕಲ್‌ಬಾಲ್ ಸಂಸ್ಥೆಯು ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ಮಾನ್ಯತೆ ಪಡೆದ ನಂತರ ಹಮ್ಮಿಕೊಂಡ ಮೊದಲ ರಾಷ್ಟ್ರೀಯ ಟೂರ್ನಿ ಇದಾಗಿದೆ’ ಎಂದು ಶ್ರೀಹರ್ಷ ಹೇಳಿದರು.
ಸುದ್ದಿಗೋಷ್ಠಿಯಲ್ಲಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್ ಮತ್ತು ರಾಷ್ಟ್ರೀಯ ತಂಡದ ಆಟಗಾರ ಆಶಿಕ್ ಕುರುಣಿಯನ್, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಸ್ಪೋರ್ಟ್ಸ್ ಸ್ಕೂಲ್‌ನ ಸಹ ಸಂಸ್ಥಾಪಕ ಶ್ರೀನಿವಾಸ್ ಟಿ.ಆರ್. ಟೂರ್ನಿಗೆ ಬೆಂಬಲ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.