ಪ್ರೊ ಕಬಡ್ಡಿ ಲೀಗ್
ಪಂಚಕುಲಾ: ಪಂಕಜ್ ಮೋಹಿತೆ ಅವರ ಮಿಂಚಿನ ದಾಳಿಯ ಬಲದಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಪುಣೇರಿ ಪಲ್ಟನ್ ತಂಡವು 40–38ರಿಂದ ಯುಪಿ ಯೋಧಾಸ್ ಎದುರು ಜಯಿಸಿತು. ಇದರೊಂದಿಗೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಿತು. ಜೈಪುರ್ ಪಿಂಕ್ ಪ್ಯಾಂಥರ್ಸ್ ಕೂಡ ಈಗಾಗಲೇ ಸೆಮಿ ಹಂತಕ್ಕೆ ಪ್ರವೇಶಿಸಿದೆ.
ಉಭಯ ತಂಡಗಳ ನಡುವಣ ನಡೆದ ರೋಚಕ ಹಣಾಹಣಿಯಲ್ಲಿ ಪುಣೇರಿ ತಂಡವು ಮೊದಲಾರ್ಧದಲ್ಲಿ 15–28ರಿಂದ ಹಿಂದೆ ಇತ್ತು. 13 ಅಂಕಗಳ ವ್ಯತ್ಯಾಸವನ್ನು ಮೀರಿ ನಿಂತು ಜಯಿಸುವಲ್ಲಿ ಪುಣೇರಿ ಸಫಲವಾಯಿತು. ಅದಕ್ಕೆ ಕಾರಣವಾಗಿದ್ದು ರೇಡರ್ ಪಂಕಜ್ ಮೋಹಿತೆ ಅವರ ಮಿಂಚಿನ ದಾಳಿ. ಅವರು 12 ಅಂಕಗಳನ್ನು ಗಳಿಸಿದರು. ಯುಪಿ ಯೋಧಾ ತಂಡದ ಗಗನ್ ಗೌಡ ಕೂಡ 16 ಅಂಕ ಗಳಿಸಿದರು.
ಸುಶೀಲ್ ಸಂಘಟಿಸಿದ ಮಿಂಚಿನ ದಾಳಿಯ ಬಲದಿಂದ ಬೆಂಗಳೂರು ಬುಲ್ಸ್ ತಂಡವು ಇನ್ನೊಂದು ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಬೆಂಗಳೂರು ತಂಡವು 53–39ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಿಸಿತು. ಆದರೆ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಯಿತು.
ಸುಶೀಲ್ 22 ಅಂಕಗಳನ್ನು ಗಳಿಸಿ ತಂಡದ ಜಯದ ರೂವಾರಿಯಾದರು. ಲೆಫ್ಟ್ ರೇಡಿಂಗ್‌ನಲ್ಲಿ ಮಿಂಚಿದ ಅಕ್ಷಿತ್ ಎಂಟು ಅಂಕ ಗಳಿಸಿದರು. ಹರಿಯಾಣ ತಂಡದ ತೇಜಸ್ ಪಾಟೀಲ ಅವರೂ 11 ಅಂಕ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.