ADVERTISEMENT

ಗೆಲುವಿಗೆ ದೃಢ ಮನೋಭಾವ ಅಗತ್ಯ: ಹಾಕಿ ಕೋಚ್‌ ರೀಡ್ ಕಿವಿಮಾತು

ಪಿಟಿಐ
Published 25 ಜುಲೈ 2020, 12:54 IST
Last Updated 25 ಜುಲೈ 2020, 12:54 IST
ಗ್ರಹಾಂ ರೀಡ್‌ (ಎಡ)–ಪಿಟಿಐ ಚಿತ್ರ
ಗ್ರಹಾಂ ರೀಡ್‌ (ಎಡ)–ಪಿಟಿಐ ಚಿತ್ರ   

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ದೃಢ ಮನೋಭಾವ ಅಗತ್ಯ. ಭಾರತ ಹಾಕಿ ತಂಡದಮುಖ್ಯ ಕೋಚ್‌ ಗ್ರಹಾಂ ರೀಡ್‌ ಅವರು ಆಟಗಾರರಲ್ಲಿ ಇಂತಹ ಮನೋಭಾವ ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ ಒಂದು ವರ್ಷ ಮುಂದೂಡಿಕೆಯಾಗಿದೆ.ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಇಂದಿನಿಂದ ಸರಿಯಾಗಿ ಒಂದು ವರ್ಷದ ಬಳಿಕ ಜಪಾನ್‌ ರಾಜಧಾನಿಯಲ್ಲಿ ತರಬೇತಿ ಆರಂಭಿಸಲಿವೆ.

‘ಕ್ರೀಡಾಲೋಕದಲ್ಲಿ ಒಲಿಂಪಿಕ್ಸ್‌ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಇದಕ್ಕೆ ಆಟಗಾರರ ಮಾನಸಿಕ ಸ್ಥಿತಿ ಹೊಂದಿಕೊಳ್ಳಬೇಕು. ಆಟದ ಕಡೆ ಗಮನ ಕೇಂದ್ರೀಕರಿಸುವುದು ಸವಾಲಿನ ಕೆಲಸ. ಕೂಟದ ಮೊದಲ ಪಂದ್ಯ ಆಡುವಾಗ ಹಲವು ಭಾವನೆಗಳು ಮನದಲ್ಲಿರುತ್ತವೆ. ಈ ಭಾವನೆಗಳನ್ನು ನಿಯಂತ್ರಿಸಿ ಆಟಕ್ಕೆ ಹೊಂದಿಕೊಂಡು ಮುಂದುವರಿಯಬೇಕು’ ಎಂದು ರೀಡ್‌ ಹೇಳಿದ್ದಾಗಿ ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಆಟದ ಎಲ್ಲ ವಿಭಾಗಗಳಲ್ಲಿ ಸುಧಾರಿಸಿಕೊಳ್ಳುವ ಅವಕಾಶವಿದೆ. ಆದರೆ ಅನಿರೀಕ್ಷಿತ ಸಮಯವನ್ನು ಎದುರಿಸಲು ದೃಢಮನೋಭಾವವುಳ್ಳ ತಂಡ ಕಟ್ಟುವ ಬಗೆಯನ್ನು ರೀಡ್‌ ವಿವರಿಸಿದರು.

‘ಮುಂದಿನ 12 ತಿಂಗಳುಗಳು ನಮಗೆ ಅತ್ಯಂತ ಸವಾಲಿನ ದಿನಗಳು. ದೇಹವನ್ನು ಸದೃಢವಾಗಿರಿಸಿಕೊಳ್ಳುವುದು, ಉತ್ತಮ ತರಬೇತಿಯನ್ನು ಹೊಂದುವುದು ನಮ್ಮ ಕೈಯಲ್ಲಿದೆ’ ಎಂದು ರೀಡ್‌, ಆಟಗಾರರಿಗೆ ಕಿವಿಮಾತು ಹೇಳಿದರು.

1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ಬೆಳ್ಳಿ ಪದಕ ಗೆದ್ದ ವೇಳೆ ರೀಡ್‌ ಅವರು ಆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.