ADVERTISEMENT

ಚೆನ್ನೈನಲ್ಲಿ ಚದುರಂಗ ಚಿತ್ತಾರ

ನೆಹರೂ ಕ್ರೀಡಾಂಗಣದಲ್ಲಿ ಚೆಸ್‌ ಒಲಿಂಪಿಯಾಡ್‌ಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 0:28 IST
Last Updated 29 ಜುಲೈ 2022, 0:28 IST
ಕಲಾವಿದರ ತಂಡವು ನೃತ್ಯ ಪ್ರದರ್ಶಿಸಿತು –ಎಎಫ್‌ಪಿ ಚಿತ್ರಗಳು
ಕಲಾವಿದರ ತಂಡವು ನೃತ್ಯ ಪ್ರದರ್ಶಿಸಿತು –ಎಎಫ್‌ಪಿ ಚಿತ್ರಗಳು   

ಚೆನ್ನೈ: ವಿಶ್ವದ ಶ್ರೇಷ್ಠ ಚದುರಂಗ ಚತುರರ ಸೇರಿರುವ ಚೆಸ್ ಒಲಿಂಪಿಯಾಡ್‌ಗೆ ಗುರುವಾರ ರಾತ್ರಿ ರಂಗುರಂಗಿನ ಚಾಲನೆ ಲಭಿಸಿತು.

ಪ್ರಧಾನಿ ನರೇಂದ್ರ ಮೋದಿ ಒಲಿಂಪಿಯಾಡ್ ಉದ್ಘಾಟಿಸಿದರು. ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಕ್ರೀಡಾಜ್ಯೋತಿ ಹಸ್ತಾಂತರಿಸಿದರು.

ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸೇರಿದ್ದ187 ದೇಶಗಳ ಸ್ಪರ್ಧಿಗಳ ಸಮ್ಮುಖದಲ್ಲಿ ಕಲಾವಿದರು ಭಾರತದ ಸಾಂಪ್ರದಾಯಿಕ ನೃತ್ಯ, ಸಂಗೀತ ಕಲೆಗಳ ರಸದೌತಣ ಉಣಬಡಿಸಿದರು.

ADVERTISEMENT

ಕಥಕ್, ಒಡಿಸಿ, ಕುಚುಪುಡಿ, ಕಥಕ್ಕಳಿ, ಮೋಹಿನಿಆಟ್ಟಂ, ಮಣಿಪುರಿ, ಸತ್ರಿಯಾ ಮತ್ತು ಭರತನಾಟ್ಯ ಕಲಾವಿದರ ನೃತ್ಯಗಳು ಕಣ್ಮನ ಸೆಳೆದವು.

ಜಪಾನ್, ಚೀನಾ, ಆಸ್ಟ್ರೇಲಿಯಾ, ಜರ್ಮನಿ, ಇಟಲಿ, ದಕ್ಷಿಣ ಆಫ್ರಿಕಾ, ಆಸ್ಟ್ರೀಯ, ಅಲ್ಬೆನಿಯಾ, ಅಲ್ಜಿರಿಯಾ, ಅಂಗೋಲಾ, ಅರ್ಜೆಂಟಿನಾ ಮತ್ತು ಬಾರ್ಬಡಿಸ್‌ ಸೇರಿದಂತೆ ಬೇರೆ ಬೇರೆ ದೇಶಗಳ ಸ್ಪರ್ಧಿಗಳು ಹಾಜರಿದ್ದರು.

ಸಂಗೀತ ದಿಗ್ಗಜ ಎ.ಆರ್‌. ರೆಹಮಾನ್ ಅವರ ಸಂಯೋಜನೆಯ ‘ಜೈ ಹೋ..’ ಹಾಗೂ ‘ವಂದೇ ಮಾತರಂ’ ಗೀತೆಗಳೂ ಮೊಳಗಿದವು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ತಮಿಳುನಾಡಿನ ಸಾಂಪ್ರದಾಯಿಕವಾದ ಪೋಷಾಕು ಧರಿಸಿದ್ದ ಮೋದಿಯವರ ಮೇಲೆ ಹೂಮಳೆಗರೆಯಲಾಯಿತು.

‘ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಫಿಡೆ ಚೆಸ್ ಒಲಿಂಪಿಯಾಡ್‌ ಉದ್ಘಾಟಿಸುತ್ತಿರುವೆ’ ಎಂದು ಮೋದಿ ಘೋಷಿಸಿದರು.

‘ಯಾವ ಕ್ರೀಡಾಪಟುವೂ ಸೋಲುವುದಿಲ್ಲ. ಇಲ್ಲಿ ಎಲ್ಲರೂ ವಿಜಯಿಗಳು ಮತ್ತು ಭವಿಷ್ಯದ ಜಯಶಾಲಿಗಳು ಅಷ್ಟೇ. ಆದ್ದರಿಂದ ಸೋಲಿಗೆ ದೃತಿಗೆಡದೇ ಮುನ್ನುಗ್ಗಿ’ ಎಂದು ಮೋದಿ ಅವರು
ಹೇಳಿದರು.

ಹೈಕೋರ್ಟ್ ತರಾಟೆ: ಚೆಸ್‌ ಒಲಿಂಪಿಯಾಡ್‌ ಪ್ರಚಾರದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿಯವರ ಚಿತ್ರಗಳನ್ನು ಪ್ರದರ್ಶಿಸದಿರುವುದು ಸಮಂಜಸವಲ್ಲ ಎಂದು ಮದ್ರಾಸ್ ಹೈಕೋರ್ಟ್‌ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಮಧುರೈನ ಆರ್. ರಾಜೇಶ್‌ಕುಮಾರ್ ಅವರು ಈ ಕುರಿತು ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನುಮುಖ್ಯ ನ್ಯಾಯಮೂರ್ತಿ ಎಂ.ಎ ಭಂಡಾರಿ ಮತ್ತು ಎಸ್‌. ಅನಂತಿ ಅವರ ಪೀಠವು ಗುರುವಾರ ವಿಚಾರಣೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.