ADVERTISEMENT

ಚೆಸ್‌ ಟೂರ್ನಿ| ಇವಾಂಚುಕ್‌, ಗೆಲ್‌ಫಾಂಡ್‌ಗೆ ಸೋಲುಣಿಸಿದ ಪ್ರಗ್ನಾನಂದ

ಜೂಲಿಯಸ್‌ ಬಾರ್‌ ಜೆನರೇಷನ್ ಕಪ್ ಆನ್‌ಲೈನ್ ಚೆಸ್‌ ಟೂರ್ನಿ

ಪಿಟಿಐ
Published 19 ಸೆಪ್ಟೆಂಬರ್ 2022, 14:37 IST
Last Updated 19 ಸೆಪ್ಟೆಂಬರ್ 2022, 14:37 IST
ಆರ್‌. ಪ್ರಗ್ನಾನಂದ– ಪಿಟಿಐ ಚಿತ್ರ
ಆರ್‌. ಪ್ರಗ್ನಾನಂದ– ಪಿಟಿಐ ಚಿತ್ರ   

ನ್ಯೂಯಾರ್ಕ್‌ : ಭಾರತದ ಆರ್‌. ಪ್ರಗ್ನಾನಂದ ಅವರು ಜೂಲಿಯಸ್‌ ಬಾರ್‌ ಜೆನರೇಷನ್‌ ಕಪ್ ಆನ್‌ಲೈನ್ ರ‍್ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ದಿಗ್ಗಜ ಆಟಗಾರರಿಗೆ ಸೋಲುಣಿಸಿ ಗಮನಸೆಳೆದರು.

ಸೋಮವಾರ ಆರಂಭವಾದ ಟೂರ್ನಿಯ ಪಂದ್ಯಗಳಲ್ಲಿ 17 ವರ್ಷದ ಪ್ರಗ್ನಾನಂದ, ಉಕ್ರೇನ್‌ನ ವ್ಯಾಸಿಲ್‌ ಇವಾಂಚುಕ್‌, ಪೋಲೆಂಡ್‌ನ ಜಾನ್‌ ಕ್ರಿಸ್ಟಾಫ್‌ ಡುಡಾ ಮತ್ತು ಬೆಲಾರಸ್‌ ಸಂಜಾತ ಇಸ್ರೇಲ್‌ ಆಟಗಾರ ಬೋರಿಸ್‌ ಗೆಲ್‌ಫಾಂಡ್‌ ಅವರನ್ನು ಮಣಿಸಿದರು. ಬಳಿಕ ಅಮೆರಿಕದ 15 ವರ್ಷದ ಕ್ರಿಸ್ಟೊಫರ್ ಎದುರು ಭಾರತದ ಆಟಗಾರ ಸೋಲು ಕಂಡರು.

ಮೂರು ಗೆಲುವು ಸಾಧಿಸಿಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ಮುನ್ನಡೆದಿದ್ದ ಪ್ರಗ್ನಾನಂದ ಅವರು, ಒಂದು ಸೋಲಿನ ಬಳಿಕ ಎರಡನೇ ಸ್ಥಾನಕ್ಕೆ ಜಾರಿದರು. ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ಉತ್ತಮ ಆರಂಭ ಮಾಡಿದ್ದು, ಅಗ್ರಸ್ಥಾನದಲ್ಲಿದ್ದರು.

ADVERTISEMENT

ಕಾರ್ಲ್‌ಸನ್‌ ಅವರು ಭಾರತದ ಅರ್ಜುನ್‌ ಎರಡಿಗೈಸಿ, ಅಧಿಬನ್‌ ಭಾಸ್ಕರನ್‌ ಮತ್ತು ವಿಯೆಟ್ನಾಂನ ಲಿಯಮ್‌ ಕ್ವಾಂಗ್ ಎದುರು ಗೆಲುವು ಸಾಧಿಸಿದರೆ, ನೆದರ್ಲೆಂಡ್ಸ್‌ನ ಅನೀಶ್ ಗಿರಿ ಎದುರು ಡ್ರಾ ಸಾಧಿಸಿದರು. ನಾರ್ವೆ ಆಟಗಾರನ ಬಳಿ ಸದ್ಯ 10 ಪಾಯಿಂಟ್‌ಗಳಿವೆ.

ಪ್ರಗ್ನಾನಂದ,ಅರ್ಜುನ್‌ ಮತ್ತು ಅಮೆರಿಕದ ಹಾನ್ಸ್ ನೀಮನ್‌ ಜಂಟಿ ಎರಡನೇ ಸ್ಥಾನದಲ್ಲಿದ್ದರು. ಅರ್ಜುನ್‌ ಅವರು ಕಾರ್ಲ್‌ಸನ್‌ ಎದುರಿನ ಮೊದಲ ಪಂದ್ಯ ಸೋತ ಬಳಿಕ ಮೂರು ಗೆಲುವು ಸಂಪಾದಿಸಿದರು. ಅಧಿಬನ್‌, ಲಿಯಮ್‌ ಮತ್ತು ಜೆಕ್‌ ಗಣರಾಜ್ಯದ ಡೇವಿಡ್‌ ನವಾರ ಎದುರು ಅವರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.