ADVERTISEMENT

ಸೊ ಚಾಂಪಿಯನ್, ಪ್ರಜ್ಞಾನಂದ ರನ್ನರ್‌ ಅಪ್‌

ಸಿಂಕ್‌ಫೀಲ್ಡ್‌ ಕಪ್‌ ಚೆಸ್‌: ಜಿಸಿಟಿ ಫೈನಲ್‌ಗೆ ಭಾರತದ ಜಿಎಂ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 19:32 IST
Last Updated 28 ಆಗಸ್ಟ್ 2025, 19:32 IST
ಪ್ರಶಸ್ತಿ ಗೆದ್ದ ಅಮೆರಿಕದ ವೆಸ್ಲಿ ಸೊ –ಎಕ್ಸ್‌ ಚಿತ್ರ
ಪ್ರಶಸ್ತಿ ಗೆದ್ದ ಅಮೆರಿಕದ ವೆಸ್ಲಿ ಸೊ –ಎಕ್ಸ್‌ ಚಿತ್ರ   

ಸೇಂಟ್‌ ಲೂಯಿ (ಅಮೆರಿಕ), (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಸಿಂಕ್‌ಫೀಲ್ಡ್‌ ಕಪ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಆಗುವ ಮೂಲಕ ಗ್ರ್ಯಾಂಡ್‌ ಚೆಸ್ ಟೂರ್‌ ಫೈನಲ್‌ಗೆ ಸ್ಥಾನ ಕಾದಿರಿಸಿದರು. ಅಮೆರಿಕದ ವೆಸ್ಲಿ ಸೊ ಅವರು ಮೂರು ಮಂದಿಯ ಪ್ಲೇ ಆಫ್‌ನಲ್ಲಿ ಪ್ರಶಸ್ತಿ ಗೆದ್ದರು.

ಬುಧವಾರ ನಡೆದ ಅಂತಿಮ ಸುತ್ತಿನಲ್ಲಿ ಸೊ ಅವರು ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಅವರನ್ನು ಸೋಲಿಸಿ ಒಟ್ಟು ಐದೂವರೆ ಅಂಕ ಸಂಗ್ರಹಿಸಿದರು. ಪ್ರಜ್ಞಾನಂದ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನ ತಮ್ಮ ಪಂದ್ಯಗಳನ್ನು (ಕ್ರಮವಾಗಿ ಅಮೆರಿಕದ ಲೆವೋನ್ ಅರೋನಿಯನ್ ಮತ್ತು ಭಾರತದ ಡಿ.ಗುಕೇಶ್‌ ಜೊತೆ) ಜೊತೆ ಡ್ರಾ ಮಾಡಿಕೊಂಡಿದ್ದು ಅವರೂ 5.5 ಪಾಯಿಂಟ್ಸ್‌ ಸಂಗ್ರಹಿಸಿದ್ದರು. ಇದರಿಂದ ಅಗ್ರಸ್ಥಾನಕ್ಕೆ ಮೂವರ ಮಧ್ಯೆ ಪೈಪೋಟಿ ನಡೆಯಿತು. 

ವಿಜೇತರ ನಿರ್ಧಾರಕ್ಕೆ ‘ಪ್ಲೇ ಆಫ್‌’ ನಡೆಯಿತು. ಪ್ರಜ್ಞಾನಂದ ಅವರು ಕರುವಾನ ಅವರನ್ನು ಸೋಲಿಸಿ ಶುಭಾರಂಭ ಮಾಡಿದರು. ಆದರೆ ಎರಡನೇ ಪಂದ್ಯದಲ್ಲಿ ಸೋ, ಪ್ರಜ್ಞಾನಂದ ಅವರನ್ನು ಮಣಿಸಿದರು. ಮೂರನೇ ಪಂದ್ಯದಲ್ಲಿ ಸೊ ಮತ್ತು ಕರುವಾನ ಡ್ರಾ ಮಾಡಿಕೊಂಡರು. ಗರಿಷ್ಠ ಎರಡರಲ್ಲಿ 1.5 ಅಂಕ ಕಲೆಹಾಕಿದ ಸೊ ವಿಜೇತರಾದರು. ಒಂದು ಅಂಕ ಪಡೆದ ಪ್ರಜ್ಞಾನಂದ ಎರಡನೇ ಸ್ಥಾನ ಗಳಿಸಿದರು.

ADVERTISEMENT

ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರು ಗ್ರ್ಯಾಂಡ್‌ ಚೆಸ್‌ ಟೂರ್‌ (ಇದು ಆಯ್ದ ಟೂರ್ನಿಗಳ ಸರಣಿ)ನಲ್ಲಿ ಈಗಾಗಲೇ ಅತ್ಯಧಿಕ ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಪಡೆದಿದ್ದಾರೆ. ಲೆವೋನ್ ಅರೋನಿಯನ್‌, ಕರುವಾನ ಅವರೂ ಪ್ರಜ್ಞಾನಂದ ಅವರೊಂದಿಗೆ ಜಿಸಿಟಿ ಗ್ರ್ಯಾಂಡ್‌ ಫಿನಾಲೆಗೆ ಸ್ಥಾನ ಕಾದಿರಿಸಿದ್ದಾರೆ.

ಇದಕ್ಕೆ ಮೊದಲು, 9ನೇ ಸುತ್ತಿನ (ಕ್ಲಾಸಿಕಲ್‌) ನಂತರ ಸೊ, ಕರುವಾನ, ಪ್ರಜ್ಞಾನಂದ ಜಂಟಿ ಅಗ್ರಸ್ಥಾನ ಪಡೆದರೆ, ಅರೋನಿಯನ್ 9 ಸುತ್ತುಗಳಲ್ಲಿ 5 ಅಂಕ ಪಡೆದು ನಾಲ್ಕನೇ ಸ್ಥಾನ ಗಳಿಸಿದರು.

ವೇಷಿಯರ್–ಲಗ್ರಾವ್‌, ಸಾಮ್ಯುಯೆಲ್ ಸೇವಿಯನ್ (ಅಮೆರಿಕ), ಪೋಲೆಂಡ್‌ನ ಡೂಡಾ ಯಾನ್‌ ಕ್ರಿಸ್ಟೋಫ್ ಅವರು ತಲಾ 4.5 ಅಂಕ ಕಲೆಹಾಕಿ ಐದನೇ ಸ್ಥಾನ ಹಂಚಿಕೊಂಡರು. ಅಂಥ ಉತ್ತಮ ಲಯದಲ್ಲಿಲ್ಲದ ಡಿ.ಗುಕೇಶ್‌ ನಾಲ್ಕು ಅಂಕ ಪಡೆಯಲಷ್ಟೇ ಶಕ್ತರಾದರು. ಹತ್ತು ಆಟಗಾರರ ಈ ಕಣದಲ್ಲಿ ಇರಾನ್‌ ಸಂಜಾತ ಫ್ರೆಂಚ್‌ ಆಟಗಾರ ಅಲಿರೇಜಾ ಫಿರೋಜ್ (3.5) ಒಂಬತ್ತನೇ ಮತ್ತು ಅಬ್ದುತ್ತಾರೋವ್ (2.5) ಕೊನೆಯ ಸ್ಥಾನ ಗಳಿಸಿದರು.

ಕೊನೆಯ ಸುತ್ತಿನ ಇತರ ಪಂದ್ಯಗಳಲ್ಲಿ ಕ್ರಿಸ್ಟೋಫ್‌, ಲಗ್ರಾವ್ ಜೊತೆ, ಅಲಿರೇಜಾ, ಸೇವಿಯನ್ ಜೊತೆ ಡ್ರಾ ಮಾಡಿಕೊಂಡಿದ್ದರು.

ಆರ್‌. ಪ್ರಜ್ಞಾನಂದ –ಎಕ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.