ADVERTISEMENT

ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಟೂರ್ನಿ: ಪ್ರಜ್ಞಾನಂದಗೆ ಆತ್ಮೀಯ ಸ್ವಾಗತ

ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಟೂರ್ನಿ ಗೆದ್ದು ತವರಿಗೆ ಬಂದಿಳಿದ ಚೆಸ್‌ ತಾರೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 15:44 IST
Last Updated 4 ಫೆಬ್ರುವರಿ 2025, 15:44 IST
ಟಾಟಾ ಸ್ಟೀಲ್‌ ಚೆಸ್‌ ಟೂರ್ನಿ ಗೆದ್ದುಕೊಂಡ ನಂತರ ಮಂಗಳವಾರ ಚೆನ್ನೈಗೆ ಬಂದಿಳಿದ ಪ್ರಜ್ಞಾನಂದ ಅವರು ತಾಯಿ ನಾಗಲಕ್ಷ್ಮಿ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಟ್ರೋಫಿ ಪ್ರದರ್ಶಿಸಿದರು.
ಟಾಟಾ ಸ್ಟೀಲ್‌ ಚೆಸ್‌ ಟೂರ್ನಿ ಗೆದ್ದುಕೊಂಡ ನಂತರ ಮಂಗಳವಾರ ಚೆನ್ನೈಗೆ ಬಂದಿಳಿದ ಪ್ರಜ್ಞಾನಂದ ಅವರು ತಾಯಿ ನಾಗಲಕ್ಷ್ಮಿ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಟ್ರೋಫಿ ಪ್ರದರ್ಶಿಸಿದರು.   

ಚೆನ್ನೈ: ನೆದರ್ಲೆಂಡ್ಸ್‌ನ ವಿಯ್ಕ್‌ ಆನ್‌ ಝೀಯಲ್ಲಿ ನಡೆದ ಟಾಟಾ ಸ್ಟೀಲ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಗೆದ್ದ ಆರ್‌.ಪ್ರಜ್ಞಾನಂದ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿಗೆ ಬಂದಿಳಿದಾಗ ನೂರಾರು ಅಭಿಮಾನಿಗಳು, ತಮಿಳುನಾಡು ಸರ್ಕಾರದ ಅಧಿಕಾರಿಗಳು, ಚೆಸ್‌ ಫೆಡರೇಷನ್‌ ಪದಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

19 ವರ್ಷ ವಯಸ್ಸಿನ ಪ್ರಜ್ಞಾನಂದ ಅವರು ಭಾನುವಾರ ಟೂರ್ನಿಯತ ಟೈಬ್ರೇಕರ್‌ನಲ್ಲಿ ಸ್ವದೇಶದ ಆಟಗಾರ, ವಿಶ್ವ ಚಾಂಪಿಯನ್ ಗುಕೇಶ್ ಅವರನ್ನು ಮಣಿಸಿ, ತಮ್ಮ ವೃತ್ತಿ ಜೀವನದ ಅತಿ ದೊಡ್ಡ ಟೂರ್ನಿ ಗೆದ್ದಿದ್ದರು.

‘ಈ ಟೂರ್ನಿಯ ಗೆಲುವಿನಿಂದ ತುಂಬಾ ಸಂತಸವಾಗಿದೆ. ಅಂತಿಮವಾಗಿ ತಮಿಳುನಾಡಿನ ಇಬ್ಬರು ಟೈಬ್ರೇಕರ್‌ನಲ್ಲಿ ಆಡುವುದು ಖುಷಿ ಎನಿಸಿತು. ನಾವಿಬ್ಬರೂ ಚೆನ್ನಾಗಿ ಆಡಿದ್ದೆವು. ಗುಕೇಶ್ ಅವರಿಗೂ ಅಭಿನಂದನೆಗಳು. ಅವರೂ ಅತ್ಯುತ್ತಮವಾಗಿ ಆಡಿದರು’ ಎಂದು ಪ್ರಜ್ಞಾನಂದ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಮಾಧ್ಯಮದವರಿಗೆ ತಿಳಿಸಿದರು.

ADVERTISEMENT

ದಿಗ್ಗಜ ಆಟಗಾರ ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ಆಟಗಾರ ಎಂಬ ಗೌರವಕ್ಕೆ ಪ್ರಜ್ಞಾನಂದ ಭಾಜನರಾಗಿದ್ದಾರೆ. ಆನಂದ್‌ 2003, 2004 ಮತ್ತು 2006ರಲ್ಲಿ ಕೋರಸ್‌ ಟೂರ್ನಿಯಲ್ಲಿ (ಈಗಿನ ಟಾಟಾ ಸ್ಟೀಲ್‌ ಚೆಸ್‌) ಗೆದ್ದಿದ್ದರು. 1989 ಮತ್ತು 1998ರಲ್ಲೂ (ಆಗ ಹೂಗೊವೆನ್ಸ್ ಟೂರ್ನಿ ಎಂದು ಕರೆಯಲಾಗುತಿತ್ತು) ಅವರು ಪ್ರಶಸ್ತಿ ಹಂಚಿಕೊಂಡಿದ್ದರು.

ಪ್ರಜ್ಞಾನಂದ ಅವರು ಮುಂದಿನ ಟೂರ್ನಿಯಾಗಿ ಫೆಬ್ರುವರಿ 25 ರಿಂದ ಮಾರ್ಚ್‌ 7ರವರೆಗೆ ನಡೆಯುವ ಪ್ರಾಗ್‌ ಮಾಸ್ಟರ್ಸ್‌ನಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.