ಪ್ರಾಗ್ (ಝೆಕ್ ರಿಪಬ್ಲಿಕ್): ಗ್ರ್ಯಾಂಡ್‌ಮಾಸ್ಟರ್ ಅರವಿಂದ್ ಚಿದಂಬರಮ್ ಅವರು ತಮಗಿಂತ ಅನುಭವಿ ಅನಿಶ್ ಗಿರಿ ಅವರ ರಕ್ಷಣಾವ್ಯೂಹ ಭೇದಿಸಿ 39 ನಡೆಗಳಲ್ಲಿ ಗೆಲುವು ಸಾಧಿಸಿ, ಪ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲಿ ನಂತರ ಏಕಾಂಗಿಯಾಗಿ ಅಗ್ರಸ್ಥಾನಕ್ಕೆ ಏರಿದ್ದಾರೆ.
ಅರವಿಂದ್ ಅವರು ಐದು ಪಾಯಿಂಟ್ಸ್ ಗಳಿಸಿದ್ದಾರೆ. ಆರನೇ ಸುತ್ತಿನವರೆಗೆ ಅವರ ಜೊತೆ ಮುನ್ನಡೆ ಹಂಚಿಕೊಂಡಿದ್ದ ಭಾರತದ ಇನ್ನೊಬ್ಬ ಆಟಗಾರ ಪ್ರಜ್ಞಾನಂದ (4.5) ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ ಗುರುವಾರ ಏಳನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ವೀ ಯಿ (3.5) ಅವರ ಜೊತೆ 61 ನಡೆಗಳ ನಂತರ ಡ್ರಾ ಮಾಡಿಕೊಂಡರು.
ಇನ್ನು ಎರಡು ಸುತ್ತಿನ ಪಂದ್ಯಗಳು ಉಳಿದಿವೆ. ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಸ್ಯಾಮ್ ಶಂಕ್ಲಾಂಡ್ ಅವರು ವಿಯೆಟ್ನಾಮಿನ ಕ್ವಾಂಗ್ ಲೀಮ್ ಲೆ (3) ಅವರನ್ನು ಮಣಿಸಿದರು. ಕುತೂಹಲದ ಸಂಗತಿ ಎಂದರೆ, ಕ್ವಾಂಗ್ ಮತ್ತು ಅನಿಶ್ ತಮ್ಮ ಮೊದಲ ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. ಏಳನೇ ಸುತ್ತಿನಲ್ಲಿ ಇಬ್ಬರಿಗೂ ಸೋಲು ಎದುರಾಯಿತು.
ಟರ್ಕಿಯ 16 ವರ್ಷ ವಯಸ್ಸಿನ ಗುರೆಲ್ ಎಡಿಝ್ (3.5) ಅವರು ನಿರ್ಣಾಯಕ ಫಲಿತಾಂಶ ಕಂಡ ಮತ್ತೊಂದು ಪಂದ್ಯದಲ್ಲಿ ಸ್ಥಳೀಯ ಆಟಗಾರ ಗುಯೆನ್ ಥಾಯ್ ದೈ ವಾನ್ (2.5) ಅವರನ್ನು ಸೋಲಿಸಿದರು.
ಮತ್ತೊಬ್ಬ ಸ್ಥಳೀಯ ಆಟಗಾರ ಡೇವಿಡ್ ನವಾರ, ಜರ್ಮನಿಯ ವಿನ್ಸೆಂಟ್ ಕೀಮರ್ ಜೊತೆ ಡ್ರಾ ಮಾಡಿಕೊಂಡರು.
ಫಿಡೆ ಲೈವ್ ರೇಟಿಂಗ್‌ನಲ್ಲಿ ಅರವಿಂದ್ ಚಿದಂಬರಮ್ ಮೊದಲ ಬಾರಿ 15ರೊಳಗೆ ಸ್ಥಾನ ಪಡೆದಿದ್ದು, ಅವರು 14ನೇ ಕ್ರಮಾಂಕಕ್ಕೆ ಏರಿದ್ದಾರೆ. ವಿಶ್ವನಾಥನ್ ಆನಂದ್ 15ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಒಳಗೊಂಡಂತೆ ಭಾರತದ ಐವರು ಈ ಪಟ್ಟಿಯಲ್ಲಿದ್ದಾರೆ.
ಚಾಲೆಂಜರ್ಸ್ ವಿಭಾಗದಲ್ಲಿ ದಿವ್ಯಾ ದೇಶಮುಖ್ (1.5) ಅವರ ನಿರಾಶಾದಾಯಕ ನಿರ್ವಹಣೆ ಮುಂದುವರಿದಿದ್ದು ಕೊನೆಯ ಸ್ಥಾನದಲ್ಲಿದ್ದಾರೆ. ಅವರು ಏಳನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಯೊನಾಸ್ ಬುಹ್ಲ್ ಬಿಜೆರೆ ಎದುರು ಸೋಲನುಭವಿಸಿದರು.
ಈ ವಿಭಾಗದಲ್ಲಿ ಯೊನಾಸ್ ಮತ್ತು ಉಜ್ಬೇಕಿಸ್ತಾನದ ನೊದಿರ್ಬೆಕ್ ಯಾಕುಬೊಯೆವ್ (ಇಬ್ಬರೂ ತಲಾ. 5.5) ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.