ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕಿ: ಅಥ್ಲೆಟಿಕ್ಸ್ ಟ್ರ್ಯಾಕ್‌ನ ಹೊಸ ಬೆಳಕು ಪ್ರಿಯಾ ಮೋಹನ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:45 IST
Last Updated 1 ಜನವರಿ 2022, 6:45 IST
ಪ್ರಿಯಾ ಮೋಹನ್ -ಪ್ರಜಾವಾಣಿ ಚಿತ್ರ
ಪ್ರಿಯಾ ಮೋಹನ್ -ಪ್ರಜಾವಾಣಿ ಚಿತ್ರ   

ಸ್ಪೈಕ್ಸ್‌ ಶೂ ತೊಡುವುದು ಹೇಗೆಂದೇ ತಿಳಿಯದಿದ್ದ ಹುಡುಗಿಯೊಬ್ಬಳು ಸ್ಪ್ರಿಂಟ್ ತಾರೆಯಾಗಿ ಬೆಳೆದ ಬಗೆ ಅಪೂರ್ವ. ಈ ಅಪರೂಪದ ಸಾಧಕಿ ಬೆಂಗಳೂರಿನ ಅಥ್ಲೀಟ್ ಪ್ರಿಯಾ ಮೋಹನ್. ಲೋಕಾಯುಕ್ತ ನ್ಯಾಯಾಧೀಶ ಎಚ್‌.ಎ.ಮೋಹನ್ ಮತ್ತು ಚಂದ್ರಕಲಾ ಅವರ ಪುತ್ರಿ ಪ್ರಿಯಾ ಬೆಂಗಳೂರಿನಲ್ಲಿ ಓದಿ ಬೆಳೆದವರು.

2019ರಲ್ಲಿ ಗುಂಟೂರಿನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಕ್ರೀಡಾಕೂಟದ 18 ವರ್ಷದೊಳಗಿನವರ ವಿಭಾಗದ 200 ಮೀಟರ್ಸ್ ಓಟದಲ್ಲಿ 24.49 ಸೆಕೆಂಡು ಮತ್ತು 400 ಮೀಟರ್ಸ್ ಓಟದಲ್ಲಿ 55.27 ಸೆಕೆಂಡುಗಳಲ್ಲಿ ಗುರಿ ಮುಟ್ಟುವುದರೊಂದಿಗೆ ಪ್ರಿಯಾ ಭಾರತ ಅಥ್ಲೆಟಿಕ್ಸ್‌ನ ‘ಟ್ರ್ಯಾಕ್‌’ನಲ್ಲಿ ಗಮನ ಸೆಳೆದಿದ್ದರು.

15ನೇ ವಯಸ್ಸಿನಲ್ಲಿ ಕೋಚ್ ಅರ್ಜುನ್ ಅಜಯ್ ಅವರ ಕಣ್ಣಿಗೆ ಬಿದ್ದ ನಂತರ ಅವರ ಕ್ರೀಡಾಜೀವನ ಬದಲಾಯಿತು. ಒಂದು ವರ್ಷ ಕಠಿಣ ಅಭ್ಯಾಸದ ಫಲವಾಗಿ ದಕ್ಷಿಣ ಏಷ್ಯನ್ ಕ್ರೀಡಾಕೂಟ ಅವರ ಪ್ರತಿಭೆ ಇನ್ನಷ್ಟು ಬೆಳಗಿತು. ಜೂನಿಯರ್ ಫೆಡರೇಷನ್ ಕಪ್‌ ಕೂಟದಲ್ಲಿ 200 ಮೀಟರ್ಸ್, 400 ಮೀಟರ್ಸ್, 4x100 ಮೀಟರ್ಸ್ ರಿಲೆಯಲ್ಲಿ ಚಿನ್ನ ಗೆದ್ದುಕೊಂಡ ಅವರು 200 ಮತ್ತು 400 ಮೀಟರ್ಸ್ ಓಟದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.

ADVERTISEMENT

ಹಾಂಗ್‌ಕಾಂಗ್‌ನಲ್ಲಿ ನಡೆದ ಯೂತ್ ಏಷ್ಯನ್ ಕೂಟದ 400 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನಗಳಿಸಿದ ಅವರು ಮೆಡ್ಲೆ ರಿಲೆಯಲ್ಲಿ ಬೆಳ್ಳಿ ಗೆದ್ದುಕೊಂಡರು. ಕೆನ್ಯಾದ ನೈರೋಬಿಯಲ್ಲಿ ನಡೆದ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4X400 ಮೀಟರ್ಸ್‌ ಮಿಶ್ರ ರಿಲೆಯಲ್ಲಿ ಕಂಚಿನ ಪದಕ ಗಳಿಸಿದರು. ಕೋಯಿಕ್ಕೋಡ್‌ನಲ್ಲಿ ನಡೆದ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 200 ಮೀಟರ್ಸ್ ಓಟದಲ್ಲಿ 24.64 ಸೆಕೆಂಡುಗಳ ಕೂಟ ದಾಖಲೆ ನಿರ್ಮಿಸಿದ್ದರು. ರಾಷ್ಟ್ರಮಟ್ಟದಲ್ಲಿ 18 ಪದಕಗಳು ಅವರ ಮುಡಿಗೇರಿವೆ. ಅದರಲ್ಲಿ 15 ಚಿನ್ನದ ಪದಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.