
ಮುಂಬೈ: ಕರ್ನಾಟಕದ ಯುವ ಗಾಲ್ಫರ್ ಪ್ರಣವಿ ಅರಸ್ ಗುರುವಾರ ಇಂಡಿಯನ್ ಗಾಲ್ಫ್ ಪ್ರೀಮಿಯರ್ ಲೀಗ್ (ಐಜಿಪಿಎಲ್) ಟೂರ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ವೃತ್ತಿಪರ ಐಜಿಪಿಎಲ್ ಟೂರ್ನಿಯಲ್ಲಿ ಪುರುಷ ಸ್ಪರ್ಧಿಗಳನ್ನು ಮಣಿಸಿ ಕಿರೀಟ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಬಾಂಬೆ ಪ್ರೆಸಿಡೆನ್ಸಿ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಮೈಸೂರಿನ 22 ವರ್ಷದ ಪ್ರಣವಿ 8 ಅಂಡರ್‌ಗಳಲ್ಲಿ 60 ಅಂಕಗಳೊಂದಿಗೆ ಅಮೋಘ ಪ್ರದರ್ಶನ ನೀಡಿದರು. ಒಟ್ಟು 14 ಅಂಡರ್‌ಗಳೊಂದಿಗೆ ಚಾಂಪಿಯನ್ ಆದ ಅವರು ಟ್ರೋಫಿ ಮತ್ತು ₹22.50 ಲಕ್ಷ ಬಹುಮಾನ ತನ್ನದಾಗಿಸಿಕೊಂಡರು.
ಪ್ರಣವಿ ಅವರಿಗೆ ಪ್ರಬಲ ಸ್ಪರ್ಧೆಯೊಡಿದ್ದ ಚಂಡೀಗಢದ ಕರಣ್‌ದೀಪ್ ಕೊಚ್ಚರ್ ರನ್ನರ್ ಅಪ್ ಆದರು. ಕೊನೆಯ ದಿನದ ಆರಂಭದ ತನಕ ಅಗ್ರಸ್ಥಾನದಲ್ಲಿದ್ದ ಕೊಚ್ಚರ್ 12 ಅಂಡರ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿದರು. ಅವರು ₹15 ಲಕ್ಷ ಬಹುಮಾನ ಪಡೆದರು.
ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಪ್ರಣವಿ, ‘ಈ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ವೃತ್ತಿಪರ ಪುರುಷರೊಂದಿಗೆ ಸ್ಪರ್ಧಿಸಿದ್ದರಿಂದ ನನ್ನ ಆಟದ ಮಟ್ಟವನ್ನು ತಿಳಿಯಲು ಸಾಧ್ಯವಾಯಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.