ADVERTISEMENT

ಬ್ಯಾಡ್ಮಿಂಟನ್: ಪ್ರಣಯ್‌ ಶುಭಾರಂಭ; ಪ್ರಣೀತ್ ಪರಾಭವ

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಮೀರ್‌ಗೆ ಸೋಲು

ಪಿಟಿಐ
Published 28 ಜೂನ್ 2022, 13:12 IST
Last Updated 28 ಜೂನ್ 2022, 13:12 IST
ಬಿ.ಸಾಯಿ ಪ್ರಣೀತ್‌– ಎಎಫ್‌ಪಿ ಚಿತ್ರ
ಬಿ.ಸಾಯಿ ಪ್ರಣೀತ್‌– ಎಎಫ್‌ಪಿ ಚಿತ್ರ   

ಜಕಾರ್ತ: ಡರೆನ್ ಲಿವ್ ಸವಾಲು ಮೀರಿದ ಭಾರತದ ಎಚ್‌.ಎಸ್‌.ಪ್ರಣಯ್ ಅವರುಮಲೇಷ್ಯಾ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಆದರೆ ಬಿ.ಸಾಯಿ ಪ್ರಣೀತ್ ಮತ್ತು ಸಮೀರ್ ವರ್ಮಾ ಮೊದಲ ತಡೆ ದಾಟುವಲ್ಲಿ ವಿಫಲರಾಗಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಪ್ರಣಯ್‌21-14, 17-21, 21-18ರಿಂದ ಮಲೇಷ್ಯಾ ಆಟಗಾರನನ್ನು ಮಣಿಸಿದರು. 62 ನಿಮಿಷಗಳಲ್ಲಿ ಈ ಹಣಾಹಣಿ ಮುಗಿಯಿತು.

ಬಲಶಾಲಿ ಹೊಡೆತ ಮತ್ತು ರ‍್ಯಾಲಿಗಳಲ್ಲಿ ನಿಯಂತ್ರಣ ಸಾಧಿಸಿದ ಭಾರತದ ಆಟಗಾರ ಮೊದಲ ಗೇಮ್‌ನಲ್ಲಿ ಪಾರಮ್ಯ ಮೆರೆದರು. ತಿರುಗೇಟು ನೀಡಿದ ಡರೆನ್‌ ಎರಡನೇ ಗೇಮ್‌ ತಮ್ಮದಾಗಿಸಿಕೊಂಡರು. ಮೂರನೇ ಗೇಮ್‌ ಇನ್ನಷ್ಟು ರಂಗೇರಿತು. ಆದರೆ ಒತ್ತಡ ಮೀರಿನಿಂತ ಪ್ರಣಯ್‌ ಜಯ ತಮ್ಮದಾಗಿಸಿಕೊಳ್ಳುವಲ್ಲಿ ತಪ್ಪು ಮಾಡಲಿಲ್ಲ.

ADVERTISEMENT

ಹೋರಾಡಿ ಸೋತ ಪ್ರಣೀತ್‌, ಸಮೀರ್‌: ವಿಶ್ವಕ್ರಮಾಂಕದಲ್ಲಿ 19ನೇ ಸ್ಥಾನದಲ್ಲಿರುವ ಪ್ರಣೀತ್15-21, 21-19, 9-21ರಿಂದ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಎದುರು ಮಣಿದರು.50 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ, ಗಿಂಟಿಂಗ್‌ ಎದುರಿನ ಎಂಟು ಪಂದ್ಯಗಳಲ್ಲಿ ಪ್ರಣೀತ್ ಅವರಿಗೆ ಇದು ಐದನೇ ಸೋಲಾಗಿದೆ.

ಸಮೀರ್ ಅವರು 49 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ14-21, 21-13, 7-21ರಿಂದ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಎದುರು ಎಡವಿದರು.

ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ– ಎನ್‌. ಸಿಕ್ಕಿ ರೆಡ್ಡಿ ಜೋಡಿಯೂ ಟೂರ್ನಿಯಿಂದ ಹೊರಬಿದ್ದಿತು. ಮೊದಲ ಸುತ್ತಿನ ಸೆಣಸಾಟದಲ್ಲಿ ಭಾರತದ ಆಟಗಾರ್ತಿಯರು 15–21, 11–21ರಿಂದ ಜಪಾನ್‌ನ ನಮಿ ಮತ್ಸುಯಾಮಾ–ಚಿಹಾರು ಸಿದಾ ಅವರಿಗೆ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.