
ಟೋಕಿಯೊ: ಭಾರತದ ಪ್ರಾಂಜಲಿ ಪ್ರಶಾಂತ್ ಧುಮಾಲ್ ಅವರು ಇಲ್ಲಿ ನಡೆಯುತ್ತಿರುವ ಡೆಫ್‌ಲಿಂಪಿಕ್ಸ್‌ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಸೋಮವಾರ ಸ್ವರ್ಣಕ್ಕೆ ಗುರಿಯಿಟ್ಟರು. ಇದು, ಕೂಟದಲ್ಲಿ ಅವರಿಗೆ ಮೂರನೇ ಪದಕವಾಗಿದೆ.
ಪ್ರಾಂಜಲಿ ಅವರು ಫೈನಲ್ ಸುತ್ತಿನಲ್ಲಿ 34 ಪಾಯಿಂಟ್ಸ್ ಸಂಪಾದಿಸಿದರು. ಉಕ್ರೇನ್‌ನ ಮೋಸಿನಾ ಹಲೈನಾ (32 ಪಾಯಿಂಟ್ಸ್) ಬೆಳ್ಳಿ ಗೆದ್ದರೆ, ಕೊರಿಯಾದ ಜಿಯಾನ್ ಜಿವೊನ್ (30) ಕಂಚಿನ ಪದಕ ತಮ್ಮದಾಗಿಸಿಕೊಂಡರು. ಪದಕ ನಿರೀಕ್ಷೆಯಲ್ಲಿದ್ದ ಭಾರತದ ಮತ್ತೊಬ್ಬ ಶೂಟರ್ ಅನುಯಾ ಪ್ರಸಾದ್ ಅವರು ಶೂಟೌಟ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.
ಭಾರತದ ಶೂಟರ್‌ಗಳು ಕೂಟದಲ್ಲಿ ಈವರೆಗೆ 16 ಪದಕಗಳನ್ನು (7 ಚಿನ್ನ, 6 ಬೆಳ್ಳಿ ಹಾಗೂ 3 ಕಂಚು) ಗೆದ್ದಿದ್ದಾರೆ.
25 ವರ್ಷ ವಯಸ್ಸಿನ ಪ್ರಾಂಜಲಿ ಅವರು ಕ್ವಾಲಿಫಿಕೇಶನ್ ಸುತ್ತಿನಲ್ಲಿಯೂ ಅಮೋಘ ಪ್ರದರ್ಶನ ನೀಡಿದರು. 600 ಪಾಯಿಂಟ್ಸ್‌ಗಳ ಪೈಕಿ 573 ಪಾಯಿಂಟ್ಸ್ ಪಡೆದು ನೂತನ ವಿಶ್ವದಾಖಲೆ ಹಾಗೂ ಕೂಟ ದಾಖಲೆ ನಿರ್ಮಿಸಿದರು. ಅನುಯಾ ಅವರು ಎರಡನೇ ಸ್ಥಾನ ಪಡೆದಿದ್ದರು.
ಇದಕ್ಕೆ ಮೊದಲು ಮಿಶ್ರ ಪಿಸ್ತೂಲ್ ಸ್ಪರ್ಧೆಯಲ್ಲಿ ಅಭಿನವ್ ದೇಶವಾಲ್ ಅವರೊಂದಿಗೆ ಚಿನ್ನದ ಪದಕ ಜಯಿಸಿದ್ದ ಪ್ರಾಂಜಲಿ ಅವರು, ಮಹಿಳೆಯರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.