ADVERTISEMENT

ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಗೆ ಸಿಂಧು, ಮಿಥುನ್‌

ಪ್ರಣಯ್ ಅಭಿಯಾನ ಅಂತ್ಯ

ಪಿಟಿಐ
Published 21 ಜನವರಿ 2022, 15:15 IST
Last Updated 21 ಜನವರಿ 2022, 15:15 IST
ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಿ.ವಿ.ಸಿಂಧು– ಪಿಟಿಐ ಚಿತ್ರ   

ಲಖನೌ: ಹಿನ್ನಡೆಯಿಂದ ಪುಟಿದೆದ್ದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಮತ್ತು ಮಿಥುನ್‌ ಮಂಜುನಾಥ್ ಅವರು ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆಎಚ್‌.ಎಸ್‌. ಪ್ರಣಯ್ ಅವರು ಸೋತು ಹೊರನಡೆದಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಸಿಂಧು11-21, 21-12, 21-17ರಿಂದ ಥಾಯ್ಲೆಂಡ್‌ನ ಸುಪನಿದಾ ಕೇಟ್‌ಥಾಂಗ್ ಎದುರು ಜಯಿಸಿದರು. ಒಂದು ತಾಸು ಐದು ನಿಮಿಷಗಳ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಸುಪನಿದಾ ಸೋಲೊಪ್ಪಿಕೊಂಡರು.

ನಾಲ್ಕರಘಟ್ಟದ ಪಂದ್ಯದಲ್ಲಿ ಸಿಂಧು ಅವರಿಗೆ ರಷ್ಯಾದ ಇವ್‌ಜೆನಿಯಾ ಕೊಸೆತ್ಸಕಯಾ ಸವಾಲು ಎದುರಾಗಿದೆ.

ADVERTISEMENT

ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ರೋಚಕ ಪಂದ್ಯದಲ್ಲಿ ಭಾಗಿಯಾದ ಮಿಥುನ್‌, ರಷ್ಯಾದ ಸೆರ್ಜಿ ಸಿರಾಂತ್ ಎದುರು11-21, 21-12, 21-18ರಿಂದ ಜಯಿಸಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟರು. ಒಂದು ತಾಸು ಒಂದು ನಿಮಿಷ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ ಕಳೆದುಕೊಂಡಿದ್ದ ಮಿಥುನ್‌ ಪುಟಿದೆದ್ದು ಗೆಲುವು ತಮ್ಮದಾಗಿಸಿಕೊಂಡರು.

ಮಿಥುನ್ ಅವರಿಗೆ ಸೆಮಿಫೈನಲ್‌ನಲ್ಲಿ ಮರ್ಕಲ್ ಸವಾಲು ಎದುರಾಗಿದೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪ್ರಣಯ್‌ 19-21, 16-21ರಿಂದ ಫ್ರಾನ್ಸ್‌ನ ಅರ್ನಾಡ್‌ ಮರ್ಕಲ್‌ ಎದುರು ಎಡವಿದರು. 59 ನಿಮಿಷಗಳಲ್ಲಿ ಈ ಹಣಾಹಣಿ ಅಂತ್ಯವಾಯಿತು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಎಂ.ಆರ್‌. ಆರ್ಜುನ್– ತ್ರೀಶಾ ಜೋಲಿ ಜೋಡಿಯೂ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು. ಈ ಜೋಡಿಯು ಫ್ರಾನ್ಸ್‌ನ ವಿಲಿಯಮ್ ವಿಲೇಜರ್‌– ಅನ್ನೆ ಟ್ರಾನ್ ಎದುರು24-22, 21-17ರಿಂದ ಗೆದ್ದರು. ಮುಂದಿನ ಪಂದ್ಯದಲ್ಲಿ ಈ ಜೋಡಿಯು ಭಾರತದವರೇ ಆದ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಅವರನ್ನು ಎದುರಿಸುವರು.

ಮಹಿಳಾ ಡಬಲ್ಸ್‌ನಲ್ಲಿ ಭಾರತದ ರಮ್ಯಾ ವೆಂಕಟೇಶ್ ಚಿಕ್ಕಮೇನಹಳ್ಳಿ- ಅಪೇಕ್ಷಾ ನಾಯಕ್‌ ಅವರು ಮಲೇಷ್ಯಾದ ಅನ್ನಾ ಚಿಂಗ್‌ ಯಿಕ್ ಚಿಯೊಂಗ್– ತೊಹ್‌ ಮೆ ಷಿಂಗ್ ಅವರಿಗೆ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ವಾಕ್‌ಓವರ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.