ADVERTISEMENT

ಮತ್ತೆ ಬಂತು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಜಿ.ಶಿವಕುಮಾರ
Published 19 ಜನವರಿ 2020, 19:30 IST
Last Updated 19 ಜನವರಿ 2020, 19:30 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   
""
""

ಭಾರತದಲ್ಲಿ ಲೀಗ್‌ಗಳ ಪರಂಪರೆ ಶುರುವಾಗಿದ್ದು 2008ರಲ್ಲಿ. ಆ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಜನ್ಮ ತಾಳಿತ್ತು. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕನಸಿನ ಕೂಸಾಗಿದ್ದ ಈ ಲೀಗ್‌, ಚೊಚ್ಚಲ ಆವೃತ್ತಿಯಲ್ಲೇ ಅಪಾರ ಜನಮನ್ನಣೆ ಗಳಿಸಿತ್ತು. ಇದರಿಂದ ಬಿಸಿಸಿಐ ಬೊಕ್ಕಸಕ್ಕೆ ಹಣದ ಹೊಳೆಯೇ ಹರಿದಿತ್ತು. ಬಳಿಕ ‘ಮಿಲಿಯನ್‌ ಡಾಲರ್‌ ಬೇಬಿ’ ಎಂದೇ ಪ್ರಸಿದ್ಧಿ ಪಡೆದ ಐಪಿಎಲ್‌, ಅಳಿವಿನಂಚಿನಲ್ಲಿದ್ದ ಅನೇಕ ಕ್ರೀಡೆಗಳಿಗೆ ದಾರಿದೀಪವಾಯಿತು!

ಐಪಿಎಲ್‌ನಿಂದ ಪ್ರೇರಣೆ ಪಡೆದು ಇತರ ಕ್ರೀಡಾ ಫೆಡರೇಷನ್‌ಗಳೂ ಲೀಗ್‌ಗಳನ್ನು ಆರಂಭಿಸಿದವು. ಈ ಪೈಕಿ ಹಲವು ಶುರುವಾದಷ್ಟೇ ವೇಗವಾಗಿ ಮೂಲೆ ಸೇರಿದವು. ಇನ್ನು ಕೆಲವು ಜನರ ಮನಸ್ಸಿಗೆ ಮುದ ನೀಡಿದವು. ಅವುಗಳಲ್ಲಿ ಪ್ರಮುಖವಾದುದು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌).

ಬದಲಾದ ಹೆಸರು...

ADVERTISEMENT

2013ರಲ್ಲಿ ಆರಂಭವಾದ ಲೀಗ್‌ಗೆ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ಎಂದು ಹೆಸರಿಡಲಾಗಿತ್ತು. ನಂತರ ಲೀಗ್‌ ನಿಂತು ಹೋಯಿತು. 2016ರಲ್ಲಿ ಮತ್ತೆ ಲೀಗ್‌ಗೆ ಚಾಲನೆ ನೀಡಲಾಯಿತು. ಆಗ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಎಂದು ಮರುನಾಮಕರಣ ಮಾಡಲಾಯಿತು.

ಬಂಗಾ ಬೀಟ್ಸ್‌ನಿಂದ ರ‍್ಯಾಪ್ಟರ್ಸ್‌ವರೆಗೆ..

ಐಬಿಎಲ್‌ನಲ್ಲಿ ಬೆಂಗಳೂರಿನ ಬಂಗಾ ಬೀಟ್ಸ್‌ ತಂಡ ಕಣಕ್ಕಿಳಿದಿತ್ತು. ಆಗ ಯು.ವಿಮಲ್‌ ಕುಮಾರ್‌ ತಂಡದ ಕೋಚ್‌ ಆಗಿದ್ದರು. ಕ್ಯಾರೋಲಿನಾ ಮರಿನ್‌, ಪರುಪಳ್ಳಿ ಕಶ್ಯಪ್‌, ತೈ ಜು ಯಿಂಗ್‌, ಹಾಂಗ್‌ಕಾಂಗ್‌ನ ಹು ಯುನ್‌ ಹೀಗೆ ಅನೇಕ ಪ್ರತಿಭಾನ್ವಿತರು ತಂಡದಲ್ಲಿ ಆಡಿದ್ದರು. ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರು ಸಹ ಮಾಲೀಕತ್ವ ಪಡೆದ ಬಳಿಕ (2016ರಲ್ಲಿ) ತಂಡಕ್ಕೆ ಬೆಂಗಳೂರು ಬ್ಲಾಸ್ಟರ್ಸ್‌ ಎಂದು ನಾಮಕರಣ ಮಾಡಲಾಯಿತು. ನಂತರದ ಮೂರು ಆವೃತ್ತಿಗಳಲ್ಲಿ ತಂಡದಿಂದ ಪ್ರಶಸ್ತಿಯ ಸಾಧನೆ ಮೂಡಿಬರಲಿಲ್ಲ. ಹೀಗಾಗಿ ಸಚಿನ್‌ ಸಹ ಮಾಲೀಕತ್ವ ತೊರೆದಿದ್ದರು.

2018ರಲ್ಲಿ ಮ್ಯಾಟ್ರಿಕ್ಸ್‌ ಟೀಮ್‌ವರ್ಕ್‌ ಬ್ಯಾಡ್ಮಿಂಟನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಬೆಂಗಳೂರಿನ ತಂಡದ ಒಡೆತನ ಪಡೆದಿತ್ತು. ಹೀಗಾಗಿ ತಂಡದ ಹೆಸರು ಬೆಂಗಳೂರು ರ‍್ಯಾಪ್ಟರ್ಸ್‌ ಎಂದು ಬದಲಾಯಿತು. ಕಿದಂಬಿ ಶ್ರೀಕಾಂತ್‌ ಸಾರಥ್ಯದ ತಂಡ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿತು. ಈ ಬಾರಿ ಚೀನಾ ತೈಪೆಯ ತೈ ಜು ಯಿಂಗ್‌ ಅವರನ್ನು ಸೆಳೆದುಕೊಂಡಿರುವ ರ‍್ಯಾಪ್ಟರ್ಸ್‌ ಮತ್ತೊಂದು ಟ್ರೋಫಿಯ ಮೇಲೆ ಕಣ್ಣಿಟ್ಟಿದೆ.

ಹಿಂದೆ ಸರಿದ ಸೈನಾ–ಶ್ರೀಕಾಂತ್‌

ಟೋಕಿಯೊ ಒಲಿಂ‍ಪಿಕ್ಸ್‌ನತ್ತ ಗಮನಹರಿಸಿರುವ ಕಿದಂಬಿ ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್‌ ಅವರು ಇದಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಪಿಬಿಎಲ್‌ ಐದನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಶ್ರೀಕಾಂತ್‌ ಅವರು ರ‍್ಯಾಪ್ಟರ್ಸ್‌ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಸೈನಾ, ಅವಧ್‌ ವಾರಿಯರ್ಸ್‌ ಪರ ಕಣಕ್ಕಿಳಿದಿದ್ದರು.

ಸಿಂಧು–ತೈ ಜು ಮುಖಾಮುಖಿ

ಭಾರತದ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿರುವ ‍ಪಿ.ವಿ.ಸಿಂಧು ಮತ್ತು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ತೈ ಜು ಯಿಂಗ್‌ ಅವರು ಈ ಬಾರಿಯ ಲೀಗ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಜನವರಿ 31ರಂದು ಹೈದರಾಬಾದ್‌ನಲ್ಲಿ ನಡೆಯುವ ಈ ಹಣಾಹಣಿಯತ್ತ ಅಭಿಮಾನಿಗಳು ಚಿತ್ತ ನೆಟ್ಟಿದ್ದು, ಇದರಲ್ಲಿ ಸಿಂಧು ಗೆಲ್ಲುವರೇ ಎಂಬ ಕುತೂಹಲ ಗರಿಗೆದರಿದೆ.

ಈ ಬಾರಿಯ ಹರಾಜಿನಲ್ಲಿ ಹೈದರಾಬಾದ್‌ ಹಂಟರ್ಸ್‌ ತಂಡ ಸಿಂಧು ಅವರನ್ನು ₹ 77 ಲಕ್ಷ ನೀಡಿ ತನ್ನಲ್ಲೇ ಉಳಿಸಿಕೊಂಡಿತ್ತು. ಚೀನಾ ತೈಪೆಯ ತೈ ಜು ಅವರನ್ನು ಬೆಂಗಳೂರಿನ ತಂಡ ಇಷ್ಟೇ ಮೊತ್ತ ನೀಡಿ ಸೆಳೆದುಕೊಂಡಿತ್ತು.

ಬೆಂಗಳೂರಿನಲ್ಲಿ ಪಂದ್ಯಗಳಿಲ್ಲ

ಪಿಬಿಎಲ್‌ ಐದನೇ ಆವೃತ್ತಿಯ ಅಂತಿಮ ಲೆಗ್‌ನ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಬೇಕಿತ್ತು. ನಿಗದಿತ ದಿನಗಳಂದು (ಫೆಬ್ರುವರಿ 5ರಿಂದ 9) ಕಂಠೀರವ ಕ್ರೀಡಾಂಗಣ ಲಭ್ಯವಿಲ್ಲದ ಕಾರಣ‌ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರು ರ‍್ಯಾಪ್ಟರ್ಸ್‌ ಫ್ರಾಂಚೈಸ್‌, ಪಿಬಿಎಲ್‌ ಆಯೋಜಕರಿಗೆ ತಿಳಿಸಿರುವ ಕಾರಣ ಪಂದ್ಯಗಳನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ.

ಲೀಗ್‌ನಿಂದ ಏನು ಲಾಭ?

ಪಿಬಿಎಲ್‌ ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದೆನಿಸಿದೆ. ಈ ಲೀಗ್‌ ಶುರುವಾದ ಬಳಿಕ ಭಾರತದಲ್ಲಿ ಬ್ಯಾಡ್ಮಿಂಟನ್‌ಗೆ ಹೊಸ ಮೆರುಗು ಸಿಕ್ಕಿದೆ. ಬ್ಯಾಡ್ಮಿಂಟನ್‌ ಸ್ಪರ್ಧಿಗಳಿಗೆ ತಾರಾ ವರ್ಚಸ್ಸು ಲಭಿಸಿದೆ. ಕ್ರೀಡಾಪಟುಗಳು, ಕೋಚ್‌ಗಳು, ನೆರವು ಸಿಬ್ಬಂದಿ ಹೀಗೆ ಹಲವರಿಗೆ ಹಣವೂ ಸಿಗುತ್ತಿದೆ.

ತೈ ಜು ಯಿಂಗ್‌ ಅವರಂತಹ ಹಲವು ವಿದೇಶಿ ಕ್ರೀಡಾಪಟುಗಳು ಲೀಗ್‌ನಲ್ಲಿ ಆಡುತ್ತಾರೆ. ಅವರ ತಂತ್ರಗಳು, ಅಭ್ಯಾಸ ಕ್ರಮ, ಪಂದ್ಯಕ್ಕೆ ಸಜ್ಜುಗೊಳ್ಳುವ ಬಗೆ, ಒತ್ತಡವನ್ನು ಮೀರಿ ನಿಲ್ಲುವ ರೀತಿ ಹೀಗೆ ಹಲವು ವಿಷಯಗಳನ್ನು ಕಲಿಯಲು ಭಾರತದ ಸ್ಪರ್ಧಿಗಳಿಗೆ ಲೀಗ್ ನೆರವಾಗಲಿದೆ. ತಮ್ಮೊಳಗಿನ ಪ್ರತಿಭೆಯನ್ನು ಜಾಹೀರುಗೊಳಿಸಲು ಯುವ ಆಟಗಾರರಿಗೆ ಅತ್ಯುತ್ತಮ ವೇದಿಕೆಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.