ADVERTISEMENT

ಪ್ರೊ ಕಬಡ್ಡಿ ಲೀಗ್: ಹಿನ್ನಡೆಯಿಂದ ಗೆದ್ದ ದಬಂಗ್ ಡೆಲ್ಲಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 18:30 IST
Last Updated 17 ಸೆಪ್ಟೆಂಬರ್ 2025, 18:30 IST
ಡೆಲ್ಲಿ ತಂಡದ ರೇಡರ್‌ನನ್ನು ಹಿಡಿದ ತೆಲುಗು ಟೈಟನ್ಸ್‌ ಆಟಗಾರರು
ಡೆಲ್ಲಿ ತಂಡದ ರೇಡರ್‌ನನ್ನು ಹಿಡಿದ ತೆಲುಗು ಟೈಟನ್ಸ್‌ ಆಟಗಾರರು   

ಜೈಪುರ: ವಿರಾಮದ ವೇಳೆಯ ಹಿನ್ನಡೆಯಿಂದ ಚೇತರಿಸಿಕೊಂಡ ದಬಂಗ್ ಡೆಲ್ಲಿ ಕೆ.ಸಿ. ತಂಡ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು. ಇದು ಡೆಲ್ಲಿ ತಂಡಕ್ಕೆ ಸತತ ಆರನೇ ಜಯವಾಗಿದ್ದು ಲೀಗ್‌ನಲ್ಲಿ ಅಗ್ರಸ್ಥಾನ ಬಲಪಡಿಸಿಕೊಂಡಿದೆ.

ಸವಾಯಿ ಮಾನ್‌ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 33–29 ಪಾಯಿಂಟ್‌ಗಳಿಂದ ಜಯಗಳಿಸಿತು. ವಿರಾಮದ ವೇಳೆ ವಿಜೇತರು 9–14ರಲ್ಲಿ ಐದು ಪಾಯಿಂಟ್‌ಗಳ ಹಿನ್ನಡೆ ಅನುಭವಿಸಿದ್ದರು.

ವಿರಾಮದ ನಂತರ ರೇಡರ್‌ ನೀರಜ್‌ ನರ್ವಾಲ್‌ ಮಿಂಚಿ ಒಟ್ಟು 9 ಪಾಯಿಂಟ್ಸ್‌ ಕಲೆಹಾಕಿದರು. ಅವರ ಶ್ರಮ ವ್ಯರ್ಥವಾಗದಂತೆ, ರಕ್ಷಣೆಯ ವಿಭಾಗದಲ್ಲಿ ಸೌರಭ್‌ ನಂದಲ್ ಮತ್ತು ಫಝೆಲ್‌ ಅತ್ರಾಚಲಿ ಹೈಫೈವ್‌ಗಳ ಮೂಲಕ ಗಮನಸೆಳೆದರು.

ADVERTISEMENT

ಟೈಟನ್ಸ್‌ ಆರಂಭದಲ್ಲಿ ವಿಜಯ್ ಮಲಿಕ್ ಅವರ ಕೆಲವು ರೇಡ್‌ಗಳ ಮೂಲಕ ಮುನ್ನಡೆ ಪಡೆಯಿತು. ಇದಕ್ಕೆ ಪೂರಕವಾಗಿ ಶುಭಂ ಶಿಂದೆ ಅವರ ಟ್ಯಾಕಲ್‌ಗಳೂ ತಂಡದ ನೆರವಿಗೆ ಬಂದು 4–0 ಮುನ್ನಡೆ ಪಡೆಯಿತು. ಈ ಅಂತರ ಕ್ರಮೇಣ 5–2ಕ್ಕೆ ಇಳಿಯಿತು. ವಿರಾಮದ ವೇಳೆಗೆ ಡೆಲ್ಲಿ ತಂಡ ನಿಯಂತ್ರಣ ಪಡೆದಂತೆ ಕಂಡಿತು.

ಆದರೆ ಉತ್ತರಾರ್ಧದಲ್ಲಿ ನೀರಜ್‌ ಅವರಿಗೆ ರಕ್ಷಣೆ ಆಟಗಾರರ ಬೆಂಬಲವೂ ದೊರಕಿ ಡೆಲ್ಲಿ ತಂಡವು ಮುನ್ನಡೆ ಪಡೆಯತೊಡಗಿತು. ವಿರಾಮ ಕಳೆದು ಐದು ನಿಮಿಷಗಳ ನಂತರ ಡೆಲ್ಲಿ 27–22ರಲ್ಲಿ ಮುನ್ನಡೆ ಸಾಧಿಸಿತ್ತು. ಟೈಟನ್ಸ್ ತಂಡ ಹೋರಾಟ ನೀಡಿದರೂ ಎರಡನೇ ಅವಧಿಯ ಬಹುತೇಕ ಭಾಗ ಮುನ್ನಡೆ ಸಾಧಿಸಲಾಗಲಿಲ್ಲ.

ಗುರುವಾರದ ಪಂದ್ಯಗಳು:

  • ಜೈಪುರ ಪಿಂಕ್‌ ಪ್ಯಾಂಥರ್ಸ್‌– ಬೆಂಗಾಲ್‌ ವಾರಿಯರ್ಸ್‌ (ರಾತ್ರಿ 8)

  • ಯು ಮುಂಬಾ– ಪುಣೇರಿ ಪಲ್ಟನ್‌ (ರಾತ್ರಿ 9).

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಜಿಯೊ ಹಾಟ್‌ಸ್ಟರ್‌ ಆ್ಯಪ್

ತೀವ್ರ ಹೋರಾಟ ಕಂಡ ಲೀಗ್‌

ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನ ಮೊದಲ 28 ಪಂದ್ಯಗಳಲ್ಲಿ ಅರ್ಧಕ್ಕೂ ಹೆಚ್ಚು ಪಂದ್ಯಗಳ ಫಲಿತಾಂಶ ಐದು ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿ ನಿರ್ಣಯಗೊಂಡಿರುವುದು ತೀವ್ರ ಪೈಪೋಟಿಯನ್ನು ಬಿಂಬಿಸಿದೆ. ಕೇವಲ ಎಂಟು ಪಂದ್ಯಗಳಲ್ಲಷ್ಟೇ ಗೆಲುವಿನ ಅಂತರ 10 ಪಾಯಿಂಟ್‌ಗಳಿಗಿಂತ ಹೆಚ್ಚಾಗಿತ್ತು. ಕಳೆದ ಬಾರಿ (17) ಹೋಲಿಸಿದಲ್ಲಿ ಈ ಬಾರಿ 24 ಸೂಪರ್‌ ಟೆನ್‌ಗಳು ದಾಖಲಾಗಿರುವುದು ತಂಡಗಳು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿರುವುದನ್ನು ಸೂಚಿಸಿದೆ. ಐದು ಪಂದ್ಯಗಳು ಗೋಲ್ಡನ್‌ ರೈಡ್‌ನಲ್ಲಿ ಇತ್ಯರ್ಥವಾಗಿವೆ. ರಕ್ಷಣಾ ವಿಭಾಗದಲ್ಲಿ 20 ಆಟಗಾರರು ಹೈಫೈವ್ಸ್‌ ಸಾಧಿಸಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.