ADVERTISEMENT

Pro Kabaddi League |ಆಗಸ್ಟ್ 29ರಿಂದ 12ನೇ ಆವೃತ್ತಿ ಆರಂಭ: 4 ತಾಣಗಳಲ್ಲಿ ಪಂದ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 16:01 IST
Last Updated 31 ಜುಲೈ 2025, 16:01 IST
.
.   

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿ ಆಗಸ್ಟ್ 29ರಿಂದ ಆರಂಭವಾಗಲಿದೆ. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ತಮಿಳ್ ತಲೈವಾಸ್ ತಂಡಗಳು ಸೆಣಸಲಿವೆ.

2025ರ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ನಾಲ್ಕು ತಾಣಗಳಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.  ವಿಶಾಖಪಟ್ಟಣ, ಜೈಪುರ, ಚೆನ್ನೈ ಮತ್ತು ದೆಹಲಿಯಲ್ಲಿ ಪಂದ್ಯಗಳು ನಡೆಯಲಿವೆ. 

ವಿಶಾಖಪಟ್ಟಣದ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 29ರಂದು ನಡೆಯುವ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಪುಣೇರಿ ಪಲ್ಟನ್ ವಿರುದ್ಧ ಅಭಿಯಾನ ಆರಂಭಿಸಲಿದೆ. 

ADVERTISEMENT

ಲೀಗ್‌ ಹಂತದಲ್ಲಿ ಒಟ್ಟು 108 ಪಂದ್ಯಗಳು ನಡೆಯಲಿವೆ. ಬಹುತೇಕ ಪಂದ್ಯಗಳು ಡಬಲ್‌ ಹೆಡರ್‌ ಆಗಿವೆ. ಸೆ.11ರವರೆಗೆ ಮೊದಲ ಲೆಗ್‌ನ 28 ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ. 2018ರ ಬಳಿಕ ಪಿಕೆಎಲ್‌ ಪಂದ್ಯಗಳು ಇಲ್ಲಿ ನಡೆಯುತ್ತಿವೆ.

ಸೆ.12ರಿಂದ ಸೆ.27ರವರೆಗೆ ಎರಡನೇ ಲೆಗ್‌ನ 24 ಪಂದ್ಯಗಳು ಜೈಪುರದ ಎಸ್ಎಂಎಸ್ ಸ್ಟೇಡಿಯಂನ ಒಳಾಂಗಣ ಹಾಲ್‌ನಲ್ಲಿ ನಡೆಯಲಿವೆ. ಇಲ್ಲಿ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಬೆಂಗಳೂರು ಬುಲ್ಸ್‌ನೊಂದದಿಗೆ ಮುಖಾಮುಖಿಯಾಗಲಿದೆ.

ಚೆನ್ನೈನ ಎಸ್‌ಡಿಎಟಿ ಒಳಾಂಗಣ ಕ್ರೀಡಾಂಗಣದಲ್ಲಿ ಸೆ.29ರಿಂದ ಅ.12ರವರೆಗೆ ಮೂರನೇ ಲೆಗ್‌ನ ಪಂದ್ಯಗಳು ನಡೆಯಲಿವೆ. ಒಟ್ಟು 28 ಪಂದ್ಯಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲಿ ಯು.ಪಿ. ಯೋಧಾಸ್‌ ತಂಡವು ಗುಜರಾತ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ.

ಅ.13ರಿಂದ ಅ.23ರವರೆಗೆ ದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕೊನೆಯ ಲೆಗ್‌ನ 28 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡವು ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ. 

ಪ್ಲೇ ಆಫ್‌ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.