ADVERTISEMENT

Pro Kabaddi League 2021| ಪಿಂಕ್ ಪ್ಯಾಂಥರ್ಸ್ ಜಯಭೇರಿ

ಪ್ರೊ ಕಬಡ್ಡಿ: ತಮಿಳ್ ತಲೈವಾಸ್–ಯು ಮುಂಬಾ ಪಂದ್ಯ ಟೈ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 17:38 IST
Last Updated 27 ಡಿಸೆಂಬರ್ 2021, 17:38 IST
ಯುಪಿ ಯೋಧಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಆಟಗಾರರ ನಡುವಣ ಪೈಪೋಟಿ  –ಪ್ರೊ ಕಬಡ್ಡಿ ಟ್ವಿಟರ್ ಚಿತ್ರ
ಯುಪಿ ಯೋಧಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಆಟಗಾರರ ನಡುವಣ ಪೈಪೋಟಿ  –ಪ್ರೊ ಕಬಡ್ಡಿ ಟ್ವಿಟರ್ ಚಿತ್ರ   

ಬೆಂಗಳೂರು: ಅರ್ಜುನ್ ದೇಶ್ವಾಲ್ ಅವರ ಮಿಂಚಿನ ದಾಳಿಯ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೋಮವಾರ ಯುಪಿ ಯೋಧಾ ಎದುರು ಜಯಿಸಿತು.

ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ಯಾಂಥರ್ಸ್ 32–29ರಿಂದ ಯೋಧಾ ವಿರುದ್ಧ ಗೆದ್ದಿತು.

ಅಮೋಘ ದಾಳಿ ಸಂಘಟಿಸಿದ ಅರ್ಜುನ್ 11 ಅಂಕಗಳನ್ನು ಗಳಿಸಿದರು. ನಾಯಕ ದೀಪಕ್ ಹೂಡಾ ಆಲ್‌ರೌಂಡ್ ಆಟದಿಂದ 9 ಅಂಕ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಅವರಿಗೆ ನಿತಿನ್ ರಾವಳ್ (4 ಪಾಯಿಂಟ್) ಉತ್ತಮ ಜೊತೆ ನೀಡಿದರು. ಮೊದಲಾರ್ಧದಲ್ಲಿಯೇ ತಂಡವು 19–12ರಿಂದ ಮುನ್ನಡೆ ಸಾಧಿಸಿತ್ತು.

ADVERTISEMENT

ವಿರಾಮದ ನಂತರ ಯೋಧಾ ತಂಡವು ಪೈಪೋಟಿಯೊಡ್ಡಿತು.ಯೋಧಾ ತಂಡದ ಸುರೇಂದರ್ ಗಿಲ್ ಚುರುಕಿನ ದಾಳಿ ಮಾಡಿದರು. 10 ಪಾಯಿಂಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ರೋಹಿತ್ ಕುಮಾರ (7) ಕೂಡ ಮಿಂಚಿದರು.

ಟೈ ಪಂದ್ಯದಲ್ಲಿ ಮುಂಬಾ:ಮಂಜೀತ್ ಮತ್ತು ವಿ. ಅಜಿತ್ ಅವರ ಜಿದ್ದಾಜಿದ್ದಿಯ ಆಟದಿಂದಾಗಿ ತಮಿಳ್ ತಲೈವಾಸ್ ಮತ್ತು ಯು ಮುಂಬಾ ನಡುವಣ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಯಿತು.

ದಿನದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು 30–30ರಿಂದ ಸಮಬಲ ಸಾಧಿಸಿದವು. ಆದರೆ ಈ ಪಂದ್ಯದ ಮೊದಲಾರ್ಧದಲ್ಲಿ ತಲೈವಾಸ್ ತಂಡವು 17–14ರಿಂದ ಮುನ್ನಡೆಯಲಿತ್ತು. ರೇಡಿಂಗ್‌ನಲ್ಲಿ ಮಿಂಚಿದ್ದ ಮಂಜಿತ್ ಅವರಿಂದಾಗಿ ತಂಡವು ಈ ಮುನ್ನಡೆ ಸಾಧಿಸಿತ್ತು. ರಕ್ಷಣಾ ಪಡೆಯೂ ಕೂಡ ಎದುರಾಳಿ ದಾಳಿಗಾರರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

ಆದರೆ ವಿರಾಮದ ನಂತರ ಪುಟಿದೆದ್ದ ಮುಂಬಾ ತಂಡವು ಅಮೋಘ ಆಟವಾಡಿತು. ಅದರಲ್ಲೂ ಅಜಿತ್ ಅವರು ಮಿಂಚಿನ ದಾಳಿಯಿಂದ ಎದುರಾಳಿ ಆಟಗಾರರನ್ನು ಕಂಗಾಲಾಗಿಸಿದರು. ಡಿಫೆಂಡರ್, ನಾಯಕ ಫಜಲ್ ಅತ್ರಾಚಲಿ ತಂತ್ರಗಾರಿಕೆ ಮೇಲುಗೈ ಸಾಧಿಸಿತು. ಕೊನೆಯ ಐದು ನಿಮಿಷಗಳ ಆಟವು ರೋಚಕವಾಗಿತ್ತು. ಉಭಯ ತಂಡಗಳ ಆಟಗಾರರು ತುರುಸಿನ ಪೈಪೋಟಿ ನಡೆಸಿದರು.

ತಮಿಳ್ ತಂಡದ ಮಂಜಿತ್ ಎಂಟು ಮತ್ತು ಮುಂಬಾದ ಅಜಿತ್ 15 ಅಂಕಗಳನ್ನು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.