ಪ್ರೊ ಕಬಡ್ಡಿ ಲೀಗ್
ಪುಣೆ: ಬೆಂಗಳೂರು ಬುಲ್ಸ್ ತಂಡವನ್ನು ಸೋಲು ಸತತವಾಗಿ ಬೆನ್ನಟ್ಟುತ್ತಿದೆ. ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಭಾನುವಾರ 42–32 ರಲ್ಲಿ ಹತ್ತು ಅಂಕಗಳಿಂದ ಬುಲ್ಸ್ ತಂಡವನ್ನು ಸೋಲಿಸಿತು.
ವಿರಾಮದ ವೇಳೆ ತಲೈವಾಸ್ ಕೇವಲ ಒಂದು ಪಾಯಿಂಟ್ (14–13) ಮುನ್ನಡೆ ಪಡೆದಿತ್ತು. ಬುಲ್ಸ್ ತಂಡದ ರೇಡರ್ ಸುಶೀಲ್ 15 ಅಂಕಗಳನ್ನು ಗಳಿಸಿ ಸೋಲಿನಲ್ಲೂ ಪಂದ್ಯದ ಗರಿಷ್ಠ ಸ್ಕೋರರ್ ಎನಿಸಿ ಗಮನ ಸೆಳೆದರು. ನಿತಿನ್ ರಾವಲ್ ಐದು ಪಾಯಿಂಟ್ಸ್ ಗಳಿಸಿದರು. ತಲೈವಾಸ್ ತಂಡದ ಹಿಮಾಂಶು 13 ಮತ್ತು ಮೊಯಿನ್ ಶಫಗಿ 9 ಅಂಕಗಳನ್ನು ಗಳಿಸಿದರು.
ಎರಡೂ ತಂಡಗಳು ಪ್ಲೇಆಫ್ ರೇಸ್‌ನಲ್ಲಿರಲಿಲ್ಲ. ತಲೈವಾಸ್‌ಗೆ ಇದು 21 ಪಂದ್ಯಗಳಲ್ಲಿ ಎಂಟನೇ ಜಯ. ಅದು 50 ಅಂಕ ಕಲೆಹಾಕಿದ್ದು ಒಂಬತ್ತನೇ ಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಬಾಕಿಯಿದೆ. ಬುಲ್ಸ್‌ಗೆ ಇದು 21 ಪಂದ್ಯಗಳಲ್ಲಿ 18ನೇ ಸೋಲು. ಅದು ಎರಡು ಗೆಲುವು, ಒಂದು ಟೈ ಸೇರಿ ಒಟ್ಟು 19 ಅಂಕ ಗಳಿಸಿ ಕೊನೆಯ (12ನೇ) ಸ್ಥಾನದಲ್ಲಿದೆ. ಒಂದು ಪಂದ್ಯ ಆಡಲು ಇದೆ.
ಅಗ್ರಸ್ಥಾನದಲ್ಲಿ ಗಟ್ಟಿಯಾಗಿರುವ ಹರಿಯಾಣ ಸ್ಟೀಲರ್ಸ್ ದಿನದ ಎರಡನೇ ಪಂದ್ಯದಲ್ಲಿ 47–30ರಿಂದ ಯು ಮುಂಬಾ ತಂಡವನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.