ADVERTISEMENT

ಪ್ರೊ ಕಬಡ್ಡಿ: ಸೆಮಿಗೆ ಪುಣೇರಿ ಪಲ್ಟನ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 19:47 IST
Last Updated 11 ಫೆಬ್ರುವರಿ 2024, 19:47 IST
   

ಕೋಲ್ಕತ್ತ: ಸಾಂಘಿಕ ಆಟ ಪ್ರದರ್ಶಿಸಿದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಭಾನುವಾರ 56–29ರಿಂದ ತಮಿಳು ತಲೈವಾಸ್‌ ವಿರುದ್ಧ ಸುಲಭ ಜಯ ಸಾಧಿಸಿ, ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿತು.

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಲ್ಟನ್‌ ತಂಡವು ಆರಂಭದಿಂದಲೇ ಪಾರಮ್ಯ ಮೆರೆಯಿತು.

ಮಧ್ಯಂತರದ ವೇಳೆಗೆ 28–10 ಮುನ್ನಡೆ ಪಡೆದ ತಂಡವು ಉತ್ತರಾರ್ಧದಲ್ಲೂ ಹಿಡಿತ ಸಾಧಿಸಿ, 27 ಪಾಯಿಂಟ್ಸ್‌ ಅಂತರದ ಗೆಲುವು ಪಡೆದು, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ADVERTISEMENT

ಪಲ್ಟನ್‌ ತಂಡದ ಪರವಾಗಿ ಪಂಕಜ್‌ ಮೊಹಿತೆ ರೈಡಿಂಗ್‌ನಲ್ಲಿ (12) ಮಿಂಚಿ ‘ಸೂಪರ್‌ ಟೆನ್‌’ ಸಾಧನೆ ಮಾಡಿದರು. ಮೊಹಮ್ಮದ್ ರೇಜಾ, ಮೋಹಿತ್‌ ಗೋಯತ್‌ ಕ್ರಮವಾಗಿ 8 ಮತ್ತು 7 ಅಂಕ ಗಳಿಸಿದರು. ಎದುರಾಳಿ ತಂಡವನ್ನು ಮೂರು ಬಾರಿ ಆಲೌಟ್‌ ಮಾಡಿ 6 ಅಂಕ ಸಂ‍ಪಾದಿಸಿತು.

ತಲೈವಾಸ್‌ ಪರ ಮೊಹಮ್ಮದ್ ರೇಜಾ ಶಾಡ್ಲೂಯಿ ಮತ್ತು ಹಿಮಾಂಶು ನರ್ವಾಲ್ ಕ್ರಮವಾಗಿ 6 ಮತ್ತು 5 ಅಂಕ ಸಂಪಾದಿಸಿದರು.

ಆಡಿರುವ 19 ಪಂದ್ಯಗಳ ಪೈಕಿ 14ರಲ್ಲಿ ಗೆದ್ದು 81 ಪಾಯಿಂಟ್ಸ್‌ ಸಂಪಾದಿಸಿರುವ ಪಲ್ಟನ್‌ ಅಂಕಪ‍ಟ್ಟಿ ಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 77 ಅಂಕ ಪಡೆದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಎರಡನೇ ಸ್ಥಾನದಲ್ಲಿದೆ.

ಬುಲ್ಸ್‌ಗೆ ಸೋಲು: ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು 28–50ರಿಂದ ಗುಜರಾಜ್‌ ಜೈಂಟ್ಸ್‌ ತಂಡಕ್ಕೆ ಮಣಿಯಿತು. ಜೈಂಟ್ಸ್‌ ಪರವಾಗಿ ಪಾರ್ಟಿಕ್ ದಹಿಯಾ (13) ರೈಡಿಂಗ್‌ನಲ್ಲಿ ಮಿಂಚಿದರು. ಅವರಿಗೆ ನಿತಿನ್‌ (7) ಮತ್ತು ಫಜಲ್ ಅತ್ರಾಚಲಿ (6) ಸಾಥ್‌ ನೀಡಿದರು.

ಬೆಂಗಳೂರು ತಂಡದ ಪರವಾಗಿ ರಕ್ಷಿತ್‌ ಮತ್ತು ವಿಕಾಸ್‌ ಖಂಡೋಲ ತಲಾ ಆರು ಅಂಕ ಗಳಿಸಿದರು.

ಈ ಸೋಲಿನೊಂದಿಗೆ ಬುಲ್ಸ್‌ ತಂಡವು ಪಾಯಿಂಟ್‌ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.