ADVERTISEMENT

Pro Kabaddi League: ಯುಪಿ ಯೋಧಾಸ್‌ಗೆ ಎರಡನೇ ಜಯ

ಪೈರೇಟ್ಸ್‌ ವಿರುದ್ಧ 3 ಪಾಯಿಂಟ್‌ ಗೆಲುವು

ಪಿಟಿಐ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ಪಟ್ನಾ ಪೈರೇಟ್ಸ್‌ ರೇಡರ್‌ನನ್ನು ಹಿಡಿದ ಯುಪಿ ಯೋಧಾಸ್‌ ಆಟಗಾರರು &nbsp;ಎಕ್ಸ್‌ ಚಿತ್ರ</p></div>

ಪಟ್ನಾ ಪೈರೇಟ್ಸ್‌ ರೇಡರ್‌ನನ್ನು ಹಿಡಿದ ಯುಪಿ ಯೋಧಾಸ್‌ ಆಟಗಾರರು  ಎಕ್ಸ್‌ ಚಿತ್ರ

   

ವಿಶಾಖಪಟ್ಟಣ: ಕೊನೆಯ ಕ್ಷಣದವರೆಗೆ ತೀವ್ರ ಪೈಪೋಟಿ ಕಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡ ಯುಪಿ ಯೋಧಾಸ್‌ ಸೋಮವಾರ 34–31 ರಿಂದ ಪಟ್ನಾ ಪೈರೇಟ್ಸ್‌ ವಿರುದ್ಧ ಜಯಗಳಿಸಿತು. 

ರಕ್ಷಣಾ ವಿಭಾಗದ ಆಟಗಾರರಾದ ನಾಯಕ ಸುಮಿತ್ ಮತ್ತು ಆಶು ಸಿಂಗ್ ಅವರು ಅರ್ಹವಾಗಿ ‘ಹೈ ಫೈವ್ಸ್‌’ ಗಳಿಸಿದರು. ರೇಡಿಂಗ್‌ನಲ್ಲಿ ಕರ್ನಾಟಕದ ರಿಪ್ಪನ್‌ಪೇಟೆಯ ಯುವಕ ಗಗನ್‌ ಗೌಡ ಏಳು ಪಾಯಿಂಟ್‌ ಗಳಿಸುವ ಮೂಲಕ ಯುಪಿ ಯೋಧಾಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿತು.

ADVERTISEMENT

ಇಲ್ಲಿನ ವಿಶ್ವನಾಥ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಮೊದಲಾರ್ಧದ 10 ನಿಮಿಷಗಳ ಆಟದಲ್ಲಿ ಪೈರೇಟ್ಸ್‌ 7–6 ಮುನ್ನಡೆ ಗಳಿಸಿತು. ಪಟ್ನಾದ ಉತ್ಸಾಹಿ ಯುವ ರೇಡರ್‌ ಅಯಾನ್ ಲೋಚಬ್‌ ಈ ವೇಳೆ ಗಮನ ಸೆಳೆದರು. ಮೂರು ರೇಡ್‌ ಪಾಯಿಂಟ್‌ಗಳನ್ನು ಗಳಿಸಿದರು. ಕೆಲವೇ ನಿಮಿಷಗಳಲ್ಲಿ ಯುಪಿ ಯೋಧಾಸ್‌ ಆಲೌಟ್‌ ಆಯಿತು. 

ಅಯಾನ್ ಕೊನೆಗೂ ಸೂಪರ್‌ ಟ್ಯಾಕಲ್‌ನಲ್ಲಿ ಸಿಲುಕಿದ ನಂತರ ಯೋಧಾಸ್‌ ಕೊಂಚ  ಚೇತರಿಸಿಕೊಂಡಿತು. ವಿರಾಮದ ವೇಳೆಗೆ ಪಟ್ನಾ ತಂಡವೇ 19–13ರಲ್ಲಿ ಮುಂದಿತ್ತು. ಈ ಅವಧಿಯಲ್ಲಿ ಅಯಾನ್‌ ಎಂಟು ರೇಡ್‌ ಪಾಯಿಂಟ್ಸ್‌ ಕಲೆಹಾಕಿ ಮಿಂಚಿದ್ದರು.

ಪಂದ್ಯದ ಅರ್ಧ ಗಂಟೆಯ ನಂತರ ಪಟ್ನಾ ತನ್ನ ಮುನ್ನಡೆಯನ್ನು 23–19ಕ್ಕೆ ಹೆಚ್ಚಿಸಿತು. ಮಣಿಂದರ್ ಸಿಂಗ್ ಮತ್ತು ಸಬ್‌ಸ್ಟಿಟ್ಯೂಟ್‌ ರೈಡರ್ ಅಂಕಿತ್‌ ಕೂಡ ಉಪಯುಕ್ತ ಪಾಯಿಂಟ್ಸ್‌ ಗಳಿಸಿಕೊಟ್ಟರು.

ಆದರೆ ಯೋಧಾಸ್‌ ಪಟ್ಟುಬಿಡಲಿಲ್ಲ. ಭವಾನಿ ರಜಪೂತ್ ಮತ್ತು ಗಗನ್‌ ಗೌಡ ಅವರ ಯಶಸ್ವಿ  ರೇಡ್‌ಗಳ ನೆರವಿನಿಂದ ಹಿನ್ನಡೆ ಕಡಿಮೆಮಾಡಿಕೊಂಡಿತು. ಸುಮಿತ್‌ ಅಮೋಘ ಟ್ಯಾಕಲ್ ಮೂಲಕ ಅಯಾನ್‌ ಅವರನ್ನು ಅಂಕಣದಾಚೆ ಕಳುಹಿಸಿದರು. ಪಂದ್ಯ ರೋಚಕ ಸ್ಥಿತಿಗೆ ತಲುಪಿತು. ವಿರಾಮದ ಬಳಿಕ ಎಂಟನೇ ನಿಮಿಷ ಪಟ್ನಾ ಆಲೌಟ್‌ ಆಗಿ ಯೋಧಾಸ್‌ ಸ್ಕೋರ್ ಸಮಮಾಡಿಕೊಂಡಿತು.

ಯೋಧಾಸ್ ಕೊನೆಯ ಹತ್ತು ನಿಮಿಷಗಳಲ್ಲಿ ಹಿಡಿತ ಬಿಗಿಗೊಳಿಸತೊಡಗಿತು. ಅಯಾನ್ ಅವರು ಸೂಪರ್ ಟೆನ್‌ ಗಳಿಸದಂತೆ ತಡೆಯಿತು. ಮೂರು ಪಾಯಿಂಟ್‌ ಅಂತರದಲ್ಲಿ ಗೆಲುವು ಸಾಧಿಸಿತು.

ಮಂಗಳವಾರದ ಪಂದ್ಯಗಳು:

ದಬಾಂಗ್ ಡೆಲ್ಲಿ ಕೆ.ಸಿ– ಬೆಂಗಳೂರು ಬುಲ್ಸ್‌ (ರಾತ್ರಿ 8)

ಜೈಪುರ ಪಿಂಕ್‌ಪ್ಯಾಂಥರ್ಸ್‌– ಪಟ್ನಾ ಪೈರೇಟ್ಸ್‌ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.