ADVERTISEMENT

ಪ್ರೊ ಕಬಡ್ಡಿ ಲೀಗ್‌ ಸೆಮಿಫೈನಲ್‌: ಮೂರನೇ ಫೈನಲ್‌ ಮೇಲೆ ಬುಲ್ಸ್ ಕಣ್ಣು

ಪ್ರೊ ಕಬಡ್ಡಿ ಲೀಗ್‌ ಸೆಮಿಫೈನಲ್‌: ದಬಂಗ್‌ ಡೆಲ್ಲಿ ಎದುರಾಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 13:19 IST
Last Updated 22 ಫೆಬ್ರುವರಿ 2022, 13:19 IST
ಪವನ್ ಕುಮಾರ್‌ ಶೆರಾವತ್‌
ಪವನ್ ಕುಮಾರ್‌ ಶೆರಾವತ್‌   

ಬೆಂಗಳೂರು: ನಾಯಕ ಪವನ್‌ ಶೆರಾವತ್ ಪರಾಕ್ರಮದಲ್ಲಿ ಮಿನುಗುತ್ತಿರುವ ಬೆಂಗಳೂರು ಬುಲ್ಸ್ ತಂಡವು ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬುಧವಾರ ದಬಂಗ್ ಡೆಲ್ಲಿ ಸವಾಲು ಎದುರಿಸಲಿದೆ. ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಪಟ್ನಾ ಪೈರೇಟ್ಸ್ ತಂಡವು ಯುಪಿ ಯೋಧಾ ತಂಡಕ್ಕೆ ಮುಖಾಮುಖಿಯಾಗಲಿದೆ.

ಸೆಮಿಫೈನಲ್‌ನಲ್ಲಿ ಜಯಿಸಿದ ಎರಡೂ ತಂಡಗಳು ಶೆರಟನ್ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ಇದೇ 25ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

2018ರಲ್ಲಿ ನಡೆದ ಆರನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಬುಲ್ಸ್ ತಂಡವು 2015ರ ಎರಡನೇ ಆವೃತ್ತಿಯಲ್ಲಿ ರನ್ನರ್‌ ಅಪ್ ಸ್ಥಾನ ಗಳಿಸಿತ್ತು.

ADVERTISEMENT

ನಾಯಕನಾಗಿ ಮತ್ತು ಶ್ರೇಷ್ಠ ರೇಡರ್ ಆಗಿ ತಂಡವನ್ನು ಈ ಬಾರಿ ಸೆಮಿಫೈನಲ್‌ವರೆಗೆ ಕೊಂಡೊಯ್ದಿರುವ ಪವನ್ ಶೆರಾವತ್ ಬುಲ್ಸ್‌ನ ಪ್ರಮುಖ ಅಸ್ತ್ರವಾಗಿದ್ದಾರೆ. ಅವರನ್ನು ಹೊರತುಪಡಿಸಿ ರೇಡರ್‌ಗಳು ಮತ್ತು ಡಿಫೆಂಡರ್‌ಗಳು ಉತ್ತಮ ಸಾಮರ್ಥ್ಯ ತೋರುತ್ತಿರುವುದು ತಂಡದ ಶಕ್ತಿ ಹೆಚ್ಚುವಂತೆ ಮಾಡಿದೆ. ಚಂದ್ರನ್ ರಂಜೀತ್‌ ಮತ್ತು ವಿಜಯ್‌ ಅವರು ಪವನ್ ಅವರಿಗೆ ಬೆಂಬಲವಾಗಿದ್ದಾರೆ.

ಡಿಫೆನ್ಸ್‌ನಲ್ಲಿ ಸೌರಭ್‌ ನಂದಾಲ್ ಮತ್ತು ಅಮನ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ರೇಡರ್‌ ಮಂಜೀತ್ ಚಿಲ್ಲಾರ್ ಮತ್ತು ಆಲ್‌ರೌಂಡರ್‌ ಸಂದೀಪ್ ನರ್ವಾಲ್ ಅವರು ಡೆಲ್ಲಿ ತಂಡದ ಬಲವಾಗಿದ್ದಾರೆ. ಆ ತಂಡಕ್ಕೆ ತಾರಾ ರೇಡರ್‌ ನವೀನ್ ಕುಮಾರ್ ಅವರ ಫಿಟ್‌ನೆಸ್‌ ಕಳವಳದ ಸಂಗತಿಯಾಗಿದೆ. ಲೀಗ್‌ ಹಂತದಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಡೆಲ್ಲಿ ಸೆಮಿಗೆ ನೇರ ಅರ್ಹತೆ ಗಳಿಸಿತ್ತು. ಲೀಗ್‌ನಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಬೆಂಗಳೂರು ಒಂದರಲ್ಲಿ ಗೆಲುವು ಸಾಧಿಸಿದರೆ, ಮತ್ತೊಂದರಲ್ಲಿ ಟೈ ಮಾಡಿಕೊಂಡಿತ್ತು.

ಎರಡು ಬಲಿಷ್ಠ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ಯೋಧಾ–ಪೈರೇಟ್ಸ್ ಮುಖಾಮುಖಿ: ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಲೀಗ್ ಹಂತದಲ್ಲಿ ಮೊದಲ ಸ್ಥಾನ ಗಳಿಸಿರುವ ಪಟ್ನಾ ಪೈರೇಟ್ಸ್ ತಂಡವು ಯುಪಿ ಯೋಧಾ ಸವಾಲಿಗೆ ಸಜ್ಜಾಗಿದೆ. ಯೋಧಾ ತಂಡದ ರೇಡರ್‌ ಪ್ರದೀಪ್ ನರ್ವಾಲ್‌ ಭರ್ಜರಿ ಲಯದಲ್ಲಿದ್ದು, ತಮ್ಮ ಹಳೆಯ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ.

ಇರಾನ್‌ ಮೂಲದ ಮೊಹಮ್ಮದ್‌ರೆಜಾ ಶಾದ್ಲೊಯಿ ಅವರು ಪಟ್ನಾ ತಂಡಕ್ಕೆ ಡಿಫೆನ್ಸ್ ಶಕ್ತಿಯಾಗಿದ್ದಾರೆ. ಪ್ರದೀಪ್ ಅವರನ್ನು ಹೆಚ್ಚು ನಿಯಂತ್ರಿಸಿದರೆ ಪಟ್ನಾ ಫೈನಲ್‌ ಕನಸು ನನಸಾಗಬಹುದು.

ಈ ಆವೃತ್ತಿಯಲ್ಲಿ ಪವನ್ ಶೆರಾವತ್‌ ಸಾಧನೆ

ತಂಡ: ಬೆಂಗಳೂರು ಬುಲ್ಸ್

ಆಡಿದ ಪಂದ್ಯ: 23

ಗಳಿಸಿದ ಒಟ್ಟು ಪಾಯಿಂಟ್ಸ್: 302

ರೇಡ್‌ ಪಾಯಿಂಟ್ಸ್: 286

ಸಂದೀಪ್ ನರ್ವಾಲ್‌

ತಂಡ: ದಬಂಗ್ ಡೆಲ್ಲಿ

ಆಡಿದ ಪಂದ್ಯ: 22

ಗಳಿಸಿದ ಒಟ್ಟು ಪಾಯಿಂಟ್ಸ್: 59

ರೇಡ್‌ ಪಾಯಿಂಟ್ಸ್: 25

ಟ್ಯಾಕಲ್ ಪಾಯಿಂಟ್ಸ್: 34

ಸೆಮಿಫೈನಲ್ ಪಂದ್ಯಗಳು

ಪಟ್ನಾ ಪೈರೇಟ್ಸ್–ಯುಪಿ ಯೋಧಾ

ಆರಂಭ: ರಾತ್ರಿ 7.30

ದಬಂಗ್ ಡೆಲ್ಲಿ– ಬೆಂಗಳೂರು ಬುಲ್ಸ್

ಆರಂಭ: ರಾತ್ರಿ 8.30

‌ಸ್ಥಳ: ಶೆರಟನ್ ಗ್ರ್ಯಾಂಡ್‌ ಹೋಟೆಲ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.