ಕೊಚ್ಚಿ: ಅಮೋಘ ಆಟವಾಡಿದ ಕ್ಯಾಲಿಕಟ್ ಹೀರೋಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಮಂಗಳವಾರದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.
ಇಲ್ಲಿನ ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಯು ಮುಂಬಾ ವಾಲಿ ಎದುರಿನ ಪಂದ್ಯದಲ್ಲಿ ತಂಡ 3-2ರಿಂದ ಗೆದ್ದಿತು. ನಾಲ್ಕು ಸೆಟ್‌ಗಳು ಮುಕ್ತಾಯಗೊಂಡಾಗ ಉಭಯ ತಂಡಗಳು ಸಮಬಲ ಸಾಧಿಸಿದವು. ಹೀಗಾಗಿ ಕೊನೆಯ ಸೆಟ್ ರೋಚಕವಾಗಿತ್ತು. ಜೆರೋಮ್ ವಿನೀತ್ ನಾಯಕತ್ವದ ಹೀರೋಸ್ ಅಮೋಘ ಆಟವಾಡಿ ಜಯ ತನ್ನದಾಗಿಸಿಕೊಂಡಿತು.
ಮೊದಲ ಸೆಟ್‌ನಲ್ಲಿ ಹೀರೋಸ್ 15–10ರಿಂದ ಗೆದ್ದು ಶುಭಾರಂಭ ಮಾಡಿತು. ಆದರೆ ಎರಡನೇ ಸೆಟ್‌ನಲ್ಲಿ ಯು ಮುಂಬಾ ತಿರುಗೇಟು ನೀಡಿ 15–12ರಿಂದ ಗೆದ್ದಿತು. ಮೂರನೇ ಸೆಟ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿಯ ಕಾದಾಟಕ್ಕೆ ಮುಂದಾದವು. ಹೀರೋಸ್ 15–13ರಿಂದ ಗೆದ್ದು ಮುನ್ನಡೆ ಸಾಧಿಸಿತು.
ನಾಲ್ಕನೇ ಸೆಟ್‌ನ ಆರಂಭದಲ್ಲಿ ಯು ಮುಂಬಾ ಆಧಿಪತ್ಯ ಸ್ಥಾಪಿಸಿತು. ಆದರೆ ಪಟ್ಟುಬಿಡದ ಹೀರೋಸ್ ಪ್ರತಿ ಕ್ಷಣವೂ ತಿರುಗೇಟು ನೀಡುತ್ತ ಸಾಗಿತು. ಕೊನೆಗೆ ಯು ಮುಂಬಾ 15–14ರಿಂದ ಗೆದ್ದು ಸಂಭ್ರಮಿಸಿತು. ಕೊನೆಯ ಸೆಟ್‌ನಲ್ಲಿ ಯು ಮುಂಬಾ ಸಪ್ಪೆಯಾಯಿತು. ಹೀರೋಸ್ 15–9ರಿಂದ ಗೆದ್ದು ವಿಜಯೋತ್ಸವ ಆಚರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.