ADVERTISEMENT

ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಿಂಧು

ಪಿಟಿಐ
Published 18 ಸೆಪ್ಟೆಂಬರ್ 2025, 13:38 IST
Last Updated 18 ಸೆಪ್ಟೆಂಬರ್ 2025, 13:38 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಶೆಂಜೆನ್‌ (ಚೀನಾ): ಭಾರತದ ಅಗ್ರ ಸಿಂಗಲ್ಸ್‌ ಆಟಗಾರ್ತಿ ಪಿ.ವಿ.ಸಿಂಧು ಅವರು ಚೀನಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಪೊರ್ನ್‌ಪೊವಿ ಚೊಚುವಾಂಗ್ ಅವರನ್ನು ಗುರುವಾರ ನೇರ ಗೇಮ್‌ಗಳಿಂದ  ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದರು.

ಪುರುಷರ ಡಬಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಸಹ ನೇರ ಗೇಮ್‌ಗಳ ಗೆಲುವಿನೊಡನೆ ಎಂಟರ ಘಟ್ಟಕ್ಕೆ ಮುನ್ನಡೆಯಿತು.

ವಿಶ್ವ ಕ್ರಮಾಂಕದಲ್ಲಿ 14ನೇ ಸ್ಥಾನದಲ್ಲಿರುವ ಸಿಂಧು 21–15, 21–15 ರಿಂದ ಥಾಯ್ಲೆಂಡ್‌ನ ಆಟಗಾರ್ತಿಯನ್ನು 41 ನಿಮಿಷಗಳಲ್ಲಿ ಸೋಲಿಸಿದರು. ಈ  ಗೆಲುವಿನಿಂದ ಸಿಂಧು ಅವರು ಚೊಚುವಾಂಗ್‌ ವಿರುದ್ಧ ಗೆಲುವಿನ ಗೆಲುವಿನ ದಾಖಲೆಯನ್ನು 7–5ಕ್ಕೆ ಸುಧಾರಿಸಿದರು.

ADVERTISEMENT

ಸಿಂಧು ಅವರು ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆ್ಯನ್‌ ಸೆ ಯಂಗ್ ಅವರನ್ನು ಎದುರಿಸಲಿದ್ದಾರೆ. ದಕ್ಷಿಣ ಕೊರಿಯಾದ ಆ್ಯನ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್‌ ಅವರನ್ನು 23–21, 21–14 ರಿಂದ ಹಿಮ್ಮೆಟ್ಟಿಸಿದರು.

ಹಾಂಗ್‌ಕಾಂಗ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಸಿಂಧು ಇಲ್ಲಿ ನೇರ ಸೆಟ್‌ಗಳ ಗೆಲುವಿಗೆ ಸಂತಸಗೊಂಡಿದ್ದರು. ‘ಗೆಲುವಿನಿಂದ ಸಂತಸವಾಗಿದೆ. ಆರಂಭದಿಂದಲೇ ಎಚ್ಚರಿಕೆ ವಹಿಸಿ ಶೇ 100ರಷ್ಟು ಆಟ ನೀಡುವುದು ಮುಖ್ಯವಾಗಿತ್ತು. ಆಕೆ (ಚೊಚುವಾಂಗ್‌) ಉನ್ನತ  ಆಟಗಾರ್ತಿ. ಮೊದಲ ಗೇಮ್‌ ಗೆದ್ದ ನಂತರ ನಾನು ಎರಡನೇ ಗೇಮ್‌ನಲ್ಲಿ ಎಚ್ಚರಿಕೆ ವಹಿಸಿದೆ’ ಎಂದು ಸಿಂಧು ಪ್ರತಿಕ್ರಿಯಿಸಿದರು.

ಸಿಂಧು ಅವರು ಪ್ರಸ್ತುತ ಇಂಡೊನೇಷ್ಯಾದ ಮಾಜಿ ಸಿಂಗಲ್ಸ್‌ ಕೋಚ್‌ ಇರ್ವಾನ್ಸಿಯ ಅದಿ ಪ್ರಥಮ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ದಿನದ ಕೊನೆಯಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ 21–13, 21–12 ರಿಂದ ತೈವಾನ್‌ನ ಚಿಯಿ ಸಿಯಾಂಗ್ ಚಿ– ವಾಂಗ್‌ ಚಿ ಲಿನ್ ಜೋಡಿಯನ್ನು 33 ನಿಮಿಷಗಳಲ್ಲಿ ಸೋಲಿಸಿ ಡಬಲ್ಸ್‌ನಲ್ಲಿ ಎಂಟರ ಘಟ್ಟ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.